ಯೋಗ ಕೇಂದ್ರದಿಂದ ನಂಜುಂಡಶೆಟ್ಟಿ ಅವರಿಗೆ ಸನ್ಮಾನ

0 1

ಶಿವಮೊಗ್ಗ: ಕಾಯಕವೇ ಕೈಲಾಸ ಎಂಬರ ಶರಣರ ನುಡಿಯೇ ಸಾಧನೆಗೆ ಪ್ರೇರಕ. ನಾವು ಮಾಡುವ ವೃತ್ತಿಯನ್ನು ನಮ್ಮ ಉಸಿರಾಗಿಸಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಸಾಧಕ ಪ್ರಶಸ್ತಿ ಪುರಸ್ಕೃತ ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡಶೆಟ್ಟಿ ಹೇಳಿದರು.


ಶಿವಮೊಗ್ಗ ನಗರದ ಶ್ರೀ ಶಿವಗಂಗಾ ಯೋಗ ಕೇಂದ್ರ ವಿಶ್ವಸ್ಥ ಸಮಿತಿಯ ಗೌರವಾಧ್ಯಕ್ಷ ಸಿ.ವಿ.ರುದ್ರಾರಾಧ್ಯ ಕಚೇರಿಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಾಧಿಸುವ ತನಕ ಸಾಮಾಜಿಕ ಸುಖದಿಂದ ದೂರ ಇದ್ದು, ವೃತ್ತಿ ಧರ್ಮವನ್ನು ತಪಸ್ಸಾಗಿ ಅನುಸರಿಸಿ ದೊಡ್ಡ ಕನಸು ಕಾಣಬೇಕು ಎಂದು ತಿಳಿಸಿದರು.


ಬರುವ ನಿಂದನೆ, ಸೋಲುಗಳನ್ನ ಸವಾಲಾಗಿ ಸ್ವೀಕರಿಸಿ ಅವುಗಳನ್ನೇ ನಮ್ಮ ಅಭಿವೃದ್ಧಿಯ ಮೆಟ್ಟಿಲಾಗಿಸಿ ಸದಾ ಧನಾತ್ಮಕವಾಗಿ ಆಲೋಚಿಸಬೇಕು. ಪ್ರತಿ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಇರಬೇಕು. ದುಡಿಯುವ ಕಾರ್ಮಿಕರ ಶ್ರಮವನ್ನು ಅರಿತು ಮಾರ್ಗದರ್ಶನ ಮಾಡಿ ಅವರ ಭಾವನೆಗಳಿಗೆ ಸ್ಪಂದಿಸಬೇಕು. ಉದ್ಯಮದಲ್ಲಿರುವ ಶ್ರಮಿಕ ವರ್ಗದವರೆಲ್ಲರೂ ಬಹಳ ಉತ್ತಮರು. ಅವರ ಪ್ರಾಮಾಣಿಕತೆಯಿಂದ ನಾವು ಮತ್ತು ಉದ್ಯಮ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು.


ಶಿವಮೊಗ್ಗದ ಕೈಗಾರಿಕಾ ಭೀಷ್ಮರೆನಿಸಿದ್ದ ದಿವಂಗತ ಟಿ.ವಿ.ನಾರಾಯಣ ಶಾಸ್ತ್ರಿ, ಗುಂಡುರಾವ್ ಮತ್ತು ಸಹೋದ್ಯೋಗಿ ದಿವಾಕರ್, ಸುಬ್ರಹ್ಮಣ್ಯ, ಇನಾಮ್ದಾರ್, ವಸಂತ ದಿವೇಕರ್ ಇವರೆಲ್ಲರ ಸಹಕಾರ ನನ್ನ ಯಶಸ್ಸಿಗೆ ಕಾರಣ ಎಂದು ಹೇಳಿದರು.
ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಬಿ.ಸಿ.ನಂಜುಂಡ ಶೆಟ್ಟಿ ಅವರು ಶಿವಮೊಗ್ಗ ನಗರದ ಖ್ಯಾತ ಕೈಗಾರಿಕೋದ್ಯಮಿ, ದಾನಿಗಳು, ಉತ್ತಮ ಆಡಳಿತ ಕೌಶಲ್ಯ ಉಳ್ಳವರು ಆಗಿದ್ದು, ರಾಯಚೂರಿನಲ್ಲಿ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಾಣಿಜ್ಯ ಸಂಘಗಳ ಸಮಾವೇಶದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ವತಿಯಿಂದ ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೌಶಲ್ಯದಿಂದಲೇ ಗುರುತಿಸಿಕೊಂಡಿದ್ದಕ್ಕೆ ಕರ್ನಾಟಕ ಸಾಧಕ ಪ್ರಶಸ್ತಿ ಪುರಸ್ಕಾರ ನೀಡಲಾಗಿದೆ. ಇವರ ಸಾಧನೆ ಅಭಿನಂದನೀಯ ಎಂದು ಹೇಳಿದರು.


ವಿಶ್ವಸ್ಥ ಸಮಿತಿಯ ಕಾರ್ಯದರ್ಶಿ ಎಸ್ ಎಸ್ ಜ್ಯೋತಿ ಪ್ರಕಾಶ್, ಸದಸ್ಯರಾದ ಕಲಗೋಡು ರತ್ನಾಕರ್, ಹೊಸತೋಟ ಸೂರ್ಯನಾರಾಯಣ, ಯೋಗ ಕೇಂದ್ರದ ಎಚ್.ಎಮ್. ಚಂದ್ರಶೇಖರಯ್ಯ, ಜಿ.ವಿಜಯಕುಮಾರ್, ಜಿ ಎಸ್ ಓಂಕಾರ, ಜಿ.ಎಸ್. ಜಗದೀಶ್, ಕೈಗಾರಿಕಾ ಉದ್ಯಮಿ ಕೆ.ನಾಗೇಶ್ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!