ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ; ಕೆಎಸ್ಈ

0 34

ಶಿವಮೊಗ್ಗ: ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಬರಗಾಲ ಘೋಷಣೆ ಮಾಡುವುದನ್ನು ಬಿಟ್ಟು ವರ್ಗಾವಣೆ ದಂಧೆಯಲ್ಲೆ ಕಾಲ ಕಳೆಯುತ್ತಿದ್ದಾರೆ. ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿ, ಅವಮಾನಿಸಿದ ಸಚಿವ ಶಿವಾನಂದ ಪಾಟೀಲ್‌ರನ್ನು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.


ಅವರು ಇಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸೆ.8ರಂದು ರೈತರ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾಗ ರಾಜ್ಯ ಸರ್ಕಾರದ ಪರವಾಗಿ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳು ಅಥವಾ ಸಂಪುಟದ ಯಾರೊಬ್ಬ ಮಂತ್ರಿಗಳು ಬಂದು ವಿಚಾರಿಸಿಲ್ಲ. ಪ್ರತಿಭಟನೆ ಯಾತಕ್ಕಾಗಿ ಮಾಡುತ್ತಿದ್ದೀರಿ ಎಂದು ಕೇಳಿಲ್ಲ. ಇದು ಸರ್ಕಾರದ ದುರಹಂಕಾರವನ್ನು ಎತ್ತಿ ತೋರಿಸಿದೆ ಎಂದರು.
ಸೆ.4ರಂದು ಬರಗಾಲ ಘೋಷಣೆ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿಗಳು ಈಗ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕು ಎಂದು ಹೇಳಿ ಸಮಯ ಕಳೆಯುತ್ತಿದ್ದಾರೆ. ಕಂದಾಯ ಇಲಾಖೆ ಸತ್ತು ಹೋಗಿದೆ. ಯಾವೊಬ್ಬ ಮಂತ್ರಿಯೂ ರೈತರ ಬಳಿ ತೆರಳಿ ವಿಚಾರಿಸಿಲ್ಲ. ಹೀಗೇ ಮುಂದುವರಿದರೆ ಸಚಿವರನ್ನು ಜಿಲ್ಲೆಗೆ ಬರಲು ಬಿಡುವುದಿಲ್ಲ. ಮುತ್ತಿಗೆ ಹಾಕುತ್ತೇವೆ. ಜೈಲ್ ಭರೋ ಚಳುವಳಿ ನಡೆಸುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ನಿಂತುಹೋದ ಎಲ್ಲಾ ಕಾಮಗಾರಿಗಳಿಗೂ ಕೂಡಲೇ ಹಣ ಬಿಡುಗಡೆ ಮಾಡಬೇಕು. ವಸತಿ ಯೋಜನೆಯಡಿ ಮನೆ ನೀಡುವ ಕಾಮಗಾರಿಯನ್ನು ನಿಲ್ಲಿಸಿದ್ದು, ಹಣ ಬಿಡುಗಡೆ ಮಾಡದಿದ್ದರೆ ಎಲ್ಲಾ ಸಂತ್ರಸ್ತರನ್ನು ಜೊತೆಗೂಡಿಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.


ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿಗಳು ಚಕ್ಕುಲಿಯಾಗಿ ಗೋಚರಿಸುತ್ತಿದ್ದು, ಗ್ಯಾರಂಟಿಗಳನ್ನು ನೀಡುತ್ತಾ ಸದ್ದಿಲ್ಲದೆ ತೆರಿಗೆ ಹೆಚ್ಚಿಸಿ ಬಡವರ ಮೇಲೆ ಬರೆ ಎಳೆದಿದ್ದಾರೆ. ರೈತರಿಗೆ ವಿದ್ಯುತ್ ನೀಡುತ್ತಿಲ್ಲ. ವಿದ್ಯುತ್ ದರವನ್ನ ಹೆಚ್ಚಿಸಿದ್ದಾರೆ. ಬಿಜೆಪಿ ಸರ್ಕಾರ ರೈತರಿಗೆ 10ಹೆಚ್‌ಪಿ ವಿದ್ಯುತ್ ಉಚಿತವಾಗಿ ನೀಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿದೆ. ರೈತರ ಆತ್ಮಹತ್ಯೆ ಬಗ್ಗೆ ಓರ್ವ ಸಚಿವರು ಹಗುರವಾಗಿ ಮಾತನಾಡಿ,5 ಲಕ್ಷ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವಮಾನಿಸಿದ್ದಾರೆ. ಬಿಜೆಪಿ ವತಿಯಿಂದ ಆ ಸಚಿವರಿಗೆ 2ಕೋಟಿ ರೂ. ಸಂಗ್ರಹ ಮಾಡಿ ಆ ಸಚಿವರಿಗೆ ಕೊಡಲು ಸಿದ್ಧರಿದ್ದೇವೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ ಅವರು, ಅನ್ನ ನೀಡುವ ರೈತರ ಜೀವಕ್ಕೆ ಬೆಲೆ ಕಟ್ಟಲಾಗುವುದಿಲ್ಲ ಎಂಬುದನ್ನು ಸರ್ಕಾರ ತಿಳಿಯಲಿ ಎಂದರು.


ಕೇಂದ್ರ ಸರ್ಕಾರದಕೃಷಿ ಸಮ್ಮಾನ್, ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ.ತಕ್ಷಣ ಬರಪೀಡಿತ ತಾಲೂಕುಗಳನ್ನು ಘೋಷಿಸಿ ಬೆಳೆ ವಿಮೆಹಣ ಮತ್ತು ಬೆಳೆನಷ್ಟದ ಪರಿಹಾರವನ್ನು ರೈತರಿಗೆ ನೀಡಬೇಕು. ಸಬ್ಸಿಡಿ ಗೊಬ್ಬರ ಒದಗಿಸಬೇಕು. ನೀರಿನ ಕೊರತೆ ಇರುವಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಸರಾಸರಿ ಮಳೆ ಕಡಿಮೆ ಇದ್ದೆಡೆ ಕೂಡಲೇ ಬರ ತಾಲೂಕು ಎಂದು ಘೋಷಿಸಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಬೇಕು. ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು. ರೈತರಿಗೆ ಮೇವು ಮತ್ತು ನೀರು ಸಿಗದೆ ಇರುವ ಪರಿಸ್ಥಿತಿ ಉಂಟಾಗಿದೆ. ಮೂಗಿಗೆ ತುಪ್ಪ ಸವರುವ ಕಾರ್ಯ ಬಿಟ್ಟು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಿ. ಆತ್ಮಹತ್ಯೆ ಮಾಡಿಕೊಂಡ ರೈತಕುಟುಂಬಕ್ಕೆ ತಕ್ಷಣ ಪರಿಹಾರ ನೀಡಿ. ಇಲ್ಲವಾದಲ್ಲಿ ಬೃಹತ್ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು.


ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ ಮಾತನಾಡಿ, ಅನಿಯಮಿತ ವಿದ್ಯುತ್ ಕಡಿತ ನಿಲ್ಲಿಸಿ ಅಡಿಕೆ ಮರಗಳಿಗೆ ಬಂದಿರುವ ಎಲೆಚುಕ್ಕಿ ರೋಗ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಿ. ಹೆಚ್ಚುತ್ತಿರುವ ರೈತರ ಆತ್ಯಹತ್ಯೆ ಪ್ರಕರಣ ತಡೆಯಿರಿ. ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆಗೆ ಕೂಡಲೇ ಸ್ಪಂದಿಸಿ ಎಂದು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಭಾರತೀಶೆಟ್ಟಿ, ಎಸ್. ರುದ್ರೇಗೌಡ, ಮಾಜಿ ಶಾಸಕ ಅಶೋಕ್‌ನಾಯ್ಕ, ರೈಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದಿನೇಶ್ ದೇವವ್ರಂದ, ಕಾರ್ಯದರ್ಶಿ ವಿನ್ಸೆಂಟ್ ರಾಡ್ರಿಗಸ್, ಪ್ರಮುಖರಾದ ಎಸ್. ದತ್ತಾತ್ರಿ, ಕು.ಮಂಜುಳಾ ಸೇರಿದಂತೆ ಬಿಜೆಪಿ ರೈತ ಮೋರ್ಚಾದ ವಿವಿಧ ತಾಲೂಕುಗಳ ಪ್ರಮುಖರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!