ರಾಷ್ಟ್ರದ್ರೋಹಿ ಸಚಿವ ಜಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ; ಕೆ.ಎಸ್. ಈಶ್ವರಪ್ಪ ಆಗ್ರಹ

0 425

ಶಿವಮೊಗ್ಗ : ಸಂವಿಧಾನಕ್ಕೆ ಅವಮಾನ ಮಾಡಿದ ರಾಷ್ಟ್ರದ್ರೋಹಿ ಸಚಿವ ಜಮೀರ್ ಅಹ್ಮದ್ (Zameer Ahmed) ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (K.S. Eshwarappa) ಆಗ್ರಹಿಸಿದರು.

ಅವರು ಇಂದು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಸ್ಪೀಕರ್ ಸ್ಥಾನ ನೀಡಿದ್ದು, ಈಗಿರುವ ಸ್ಪೀಕರ್ ಅವರಿಗೆ ಎಲ್ಲಾ ಶಾಸಕರು ತಲೆಬಾಗಿ ನಮಸ್ಕರಿಸಬೇಕು ಎಂದು ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಹೇಳಿಕೆ ನೀಡಿರುವುದಕ್ಕೆ ತೀವ್ರವಾಗಿ ಖಂಡಿಸುತ್ತೇನೆ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದ ಸಂವಿಧಾನದ ಪ್ರಕಾರ ಆಡಳಿತ ನಡೆಸುತ್ತಿದೆಯೊ ಅಥವಾ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯೋ ಎಂಬುದರ ಬಗ್ಗೆ ಸಿಎಂ ಹೇಳಿಕೆ ನೀಡಬೇಕು ಎಂದರು.

ಸ್ಪೀಕರ್‌ಗೆ ಎಲ್ಲರೂ ಗೌರವ ಕೊಡಬೇಕು. ಅದೊಂದು ಸಂವಿಧಾನಬದ್ಧ ಸ್ಥಾನವಾಗಿದೆ. ಆ ವ್ಯಕ್ತಿ ಹಿಂದುವೇ ಆಗಿರಲಿ, ಮುಸಲ್ಮಾನನಾಗಿರಲಿ ಆ ಪೀಠಕ್ಕೆ ಎಲ್ಲರೂ ಗೌರವ ಕೊಡಬೇಕಾಗುತ್ತದೆ. ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಇದುವರೆಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷ, ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ತಪ್ಪೋ ಸರಿಯೋ ಎಂದು ಸ್ಪಷ್ಟಪಡಿಸಲಿಲ್ಲ ಎಂದರು.

ಇಂತಹ ಹೇಳಿಕೆಗಳ ವಿರುದ್ಧ ಹಿಂದೂ ಸಮಾಜ ಜಾಗೃತವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು‌ ಬೆಂಬಲಿಸುವುದರ ಮೂಲಕ ಸಂವಿಧಾನ ಒಪ್ಪುವಂತಹ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಎಂದರು.

ಬೆಂಗಳೂರಿನ ಸಯ್ಯದ್ ನಗರದಲ್ಲಿರುವ ಮುಸ್ಲಿಂ ಅನಾಥಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ಮಕ್ಕಳಿಗೆ ತಾಲಿಬಾನ್ ಶಿಕ್ಷಣ ನೀಡಲಾಗುತ್ತಿದೆ ಎಂಬ ವರದಿಯಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟೀಸ್ ಜಾರಿ ಮಾಡಿ ಅಲ್ಲಿ ನಡೆಯುತ್ತಿರುವ ಶಿಕ್ಷಣದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಅನಾಥಾಲಯದಲ್ಲಿ
ರಾಷ್ಟ್ರೀಯ ಶಿಕ್ಷಣ ನೀಡಲು ಸೂಚಿಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರ ‘ಹಲೋ ಅಪ್ಪಾ…’ ವಿಡಿಯೋ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಈ ತನಿಖೆಗೆ ಬೇಕಾಗುವ ದಾಖಲೆಗಳನ್ನು ಬಿಜೆಪಿ ನೀಡಲು ಸಿದ್ದವಿದೆ ಎಂದ ಅವರು, ಕಾಂತರಾಜ್ ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಹಾಕದಿರುವುದರಿಂದ ವರದಿ ಜಾರಿಗೆ ತೊಡಕಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಕೂಡಲೇ ಈ ವರದಿಯನ್ನು ಬಹಿರಂಗಪಡಿಸಿ ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಬೇಕು ಎಂದರು.

ಹಿಂದೂ ಮಠಾಧೀಶರ ಸಭೆ ಕರೆದು ಅವರೊಂದಿಗೆ ಈ ವರದಿ ಬಗ್ಗೆ ಚರ್ಚಿಸಬೇಕು. ಈ ಹಿಂದೆ ಸುಪ್ರೀಂಕೋರ್ಟ್ ಜಾತಿಗಣತಿ ಮತ್ತು ಜನಗಣತಿ ಬಗ್ಗೆ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ತತ್ಞರ ವರದಿ ಪಡೆದು ಎಲ್ಲರೊಂದಿಗೂ ಚರ್ಚಿಸಿ ಜಾರಿಗೆ ತರಬೇಕು. ಕೇಂದ್ರ ಸರ್ಕಾರ ಜಾತಿ ಮತ್ತು ಜನಗಣತಿ ಮಾಡಲು ಉತ್ಸುಕತೆಯಿಂದ ಇದೆ. ಅದಕ್ಕಾಗಿಯೇ ಅಮಿತ್‌ಷಾ ನೇತೃತ್ವದಲ್ಲಿ ಕರ್ನಾಟಕದಿಂದ ನಾನು ಸಿ.ಕೆ. ಮೋಹನ್ ಮತ್ತು ಶ್ರೀನಿವಾಸ್ ಪೂಜಾರಿ ಸೇರಿದಂತೆ ಒಟ್ಟು ದೇಶದಿಂದ 40 ಜನರನ್ನು ಸಭೆ ಕರೆದು ಚರ್ಚೆ ಮಾಡಿದ್ದೇವೆ. ಯಾರಿಗೂ ಅನ್ಯಾಯವಾಗದಂತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುವುದು ಕೇಂದ್ರ ಸರ್ಕಾರದ ಉದ್ದೇಶ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ಶಿವರಾಜ್, ಕೆ.ವಿ ಅಣ್ಣಪ್ಪ, ಚಂದ್ರಶೇಖರ್ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!