ವಿಕಸಿತ ಸಂಕಲ್ಪ ಯಾತ್ರೆಗೆ ಚಾಲನೆ | ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಿಸುವ ಉದ್ದೇಶ ; ಬಿ.ವೈ.ರಾಘವೇಂದ್ರ

0 224

ಶಿವಮೊಗ್ಗ : ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ‘ವಿಕಸಿತ ಸಂಕಲ್ಪ’ ಯಾತ್ರೆಯ ಉದ್ದೇಶವಾಗಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ (B.Y Raghavendra) ನುಡಿದರು.

ಕೆನರಾ ಲೀಡ್ ಬ್ಯಾಂಕ್ (Canara Bank) ಆವರಣದಲ್ಲಿ ಇಂದು ಜಿಲ್ಲೆಯಾದ್ಯಂತೆ ಸಂಚರಿಸಲಿರುವ ‘ವಿಕಸಿತ ಸಂಕಲ್ಪ ಯಾತ್ರೆ’ಯ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.

ಬುಡಕಟ್ಟು ನಾಯಕರಾದ ಬಿರ್ಸಾ ಮುಂಡಾರವರ ಜನ್ಮದಿನವಾದ ನವೆಂಬರ್ 15 ರಂದು ಜಾರ್ಕಂಡ್‍ನಲ್ಲಿ ವಿಕಸಿತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಾಯಿತು. ಕೇಂದ್ರ ಸರ್ಕಾರದ ಎಲ್ಲ ಯೋಜನೆ-ಕಾರ್ಯಕ್ರಮಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಿಳಿಸುವುದು ಹಾಗೂ ತಲುಪಿಸುವುದು ವಿಕಸಿತ ಸಂಕಲ್ಪ ಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ಎಲ್ಲ ಅರ್ಹರು ಇದರ ಸದುಪಯೋಗ ಪಡೆಯಬೇಕು.

ನಮ್ಮ ಜಿಲ್ಲೆಯಲ್ಲಿ 2 ವಿಕಸಿತ ಸಂಕಲ್ಪ ಯಾತ್ರೆಯ ವಾಹನಗಳು 262 ಗ್ರಾ.ಪಂ ಗಳಲ್ಲಿ 2024 ರ ಜ.25 ರವರೆಗೆ ಸಂಚರಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಿವೆ. ಹಾಗೂ ಸ್ಥಳದಲ್ಲೇ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಗುದು. ಕ್ವಿಜ್ ಕಾರ್ಯಕ್ರಮ, ‘ಮೇರಾ ಕಹಾನಿ ಮೇರಾ ಝುಬಾನಿ’ ಯಶೋಗಾಥೆ, ಡ್ರೋನ್ ಮೂಲಕ ಕೃಷಿ ಜಮೀನಿಗಳುಗೆ ನ್ಯಾನೋ ಯೂರಿಯಾ ಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಹೀಗೆ ಫಲಾನುಭವಿಗಳನ್ನು ತಲುಪುವ ಮೂಲಕ ಸರ್ಕಾರ ಮತ್ತು ಜನರ ನಡುವಿನ ಅಂತರ ಕಡಿಮೆ ಮಾಡಿ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ.

ದೇಶದಾದ್ಯಂತ 3 ಸಾವಿರ ವಾಹನಗಳು ವಿಕಸಿತ ಸಂಕಲ್ಪ ಯಾತ್ರೆಯನ್ನು 2 ತಿಂಗಳ ಕಾಲ ನಡೆಸಿ 25 ಲಕ್ಷ ಗ್ರಾ.ಪಂ ಮತ್ತು 15 ಸಾವಿರ ನಗರ ಪ್ರದೇಶಗಳಲ್ಲಿ ಸಂಚಾರ ನಡೆಸಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಉಪಯೋಗ ನೀಡಲಿದ್ದು, ಲೀಡ್ ಬ್ಯಾಂಕುಗಳು ಈ ಯಾತ್ರೆಯ ಜವಾಬ್ದಾರಿ ವಹಿಸಿಕೊಂಡು ಸಹಕರಿಸಲಿವೆ ಎಂದರು.

ಪ್ರಧಾನ ಮಂತ್ರಿಯವರು ಗರೀಬಿ ಕಲ್ಯಾಣ ಯೋಜನೆ ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿದ್ದಾರೆ. ತಾಯಿಂದಿರ ಆರೋಗ್ಯ ದೃಷ್ಟಿಯಿಂದ ಉಜ್ವಲ್ ಯೋಜನೆ ಜಾರಿಗೊಳಿಸಿದ್ದು, ಇನ್ನೂ 10 ಲಕ್ಷ ಕುಟುಂಬಕ್ಕೆ ಈ ಯೋಜನೆಯನ್ನು ವಿಸ್ತರಿಸಲಿದ್ದಾರೆ. ಈ ಯಾತ್ರೆಯ ವೇಳೆ ಫಲಾನುಭವಿಗಳು ಉಜ್ವಲ್ ಯೋಜನೆ, ಕೃಷಿ ಸಮ್ಮಾನ್ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ ಅವರು ಎಲ್ಲರೂ ಸೇರಿ ಈ ಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಮ್ಮ ಜನತೆಗೆ ಶಕ್ತಿ ತುಂಬಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಧಾನಿಯವರು ರೈತನಾಗಿ, ಒಬ್ಬ ತಾಯಿಯ ಜಾಗದಲ್ಲಿ ನಿಂತು ಉತ್ತಮ ಯೋಜನೆಗಳನ್ನು ತಂದು ದೇಶವನ್ನು ಉನ್ನತ ಸ್ಥಾನಕ್ಕೆ ತಂದಿದ್ದಾರೆ. ಗ್ರಾಮೀಣ, ಸಾಂಸ್ಕøತಿಕ ಭಾರತವನ್ನು ಗಮನದಲ್ಲಿರಿಸಿಕೊಂಡು ಅವರು ಸಂಕಲ್ಪ ಸಿದ್ದಿಗೊಳಿಸಿದ್ದಾರೆ. ಈ ಯಾತ್ರೆಯು 262 ಗ್ರಾಮ ಪಂಚಾಯ್ತಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದ್ದು ಜನರು ಉಪಯೋಗ ಪಡೆಯಬೇಕು ಎಂದರು.

ಲೀಡ್ ಬ್ಯಾಂಕ್ ಡಿಜಿಎಂ ದೇವರಾಜ್ ಮಾತನಾಡಿ, ವಿಕಸಿಕ ಸಂಕಲ್ಪ ಯಾತ್ರೆಯ 2 ಎಲ್‍ಇಡಿ ವಾಹನಗಳು ಜಿಲ್ಲೆಯ 262 ಗ್ರಾ.ಪಂ ಗಳನ್ನು ಸಂಚರಿಸಲಿದೆ. ಎರಡು ವಾಹನ ಸೇರಿ ದಿನಕ್ಕೆ 4 ಗ್ರಾ.ಪಂ ಸಂಚಾರ ಮಾಡಲಿದ್ದು 2024 ರ ಜ.25 ರವರೆಗೆ ಯಾವುದೇ ರಜೆ ಇಲ್ಲದೆ ಸಂಚಾರ ಮಾಡಿ ಸುಮಾರು 300 ಯೋಜನೆಗಳ ಕುರಿತು ಮಾಹಿತಿ ನೀಡಿ ಅರ್ಜಿಗಳನ್ನು ಸ್ವೀಕರಿಸಲಿವೆ. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಇದರ ಉಸ್ತುವಾರಿ ನೋಡಿಕೊಳ್ಳುವರೆಂದು ತಿಳಿಸಿದರು.

ಇದೇ ವೇಳೆ ಸಂಸದರು ವಿಕಸಿತ ಸಂಕಲ್ಪ ಯಾತ್ರೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹಾಗೂ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಗೊಬ್ಬರದ ಪ್ರಾತ್ಯಕ್ಷಿಕೆಗೆ ರಿಮೋಟ್ ಮೂಲಕ ಚಾಲನೆ ನೀಡಿದರು.

ಯೂನಿಯನ್ ಬ್ಯಾಂಕ್ ಡಿಜಿಎಂ ರಾಜಮಣಿ, ಬ್ಯಾಂಕ್ ಆಫ್ ಬರೋಡ ಎಜಿಎಂ ರವಿ, ಎಸ್‍ಬಿಐ ಡಿಜಿಎಂ ವಿಜಯ್ ಸಾಯಿ, ನಬಾರ್ಡ್ ಬ್ಯಾಂಕ್‍ನ ಶರದ್, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಡಿಎಂ ಶಾರದಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಅಮರನಾಥ್, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!