ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹ

0 1

ಶಿವಮೊಗ್ಗ: ಜಿಲ್ಲೆಯಲ್ಲಿ  ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ವಂಚನೆ ಸಂತ್ರಸ್ತರ ಠೇವಣಿದಾರರ ಕುಟುಂಬ (ಥಗಿ ಪೀಡಿತ್ ಜಮಾಕರ್ತ ಪರಿವಾರ (ಟಿಪಿಜೆಪಿ) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಲ್ಲಿ ಹೂಡಿಕೆದಾರರು, ನಾಗರಿಕರು ಹಣವನ್ನು ಹೂಡಿಕೆ ಮಾಡಿದ್ದರು. ಸಹರಾ, ಪರ್ಲ್ಸ್, ಗರೀಮಾ, ಪ್ಯಾನ್‌ಕಾರ್ಡ್ ಲಿಮಿಟೆಡ್ ಟ್ವಿಂಕಲ್, ಅಗ್ರಿಗೋಲ್ಡ್ ಸಾಯಿ ಪ್ರಸಾದ್ ಗ್ರೂಪ್ಸ್, ಅಮೃತ್ ಯೋಜನೆ, ಜನಶಕ್ತಿ, ವಿಶ್ವಾಮಿತ್ರ, ಕಲ್ಪತರು, ನೆಕ್ಸಾ, ಸಂಜೀವಿನಿ ಹೀಗೆ ನೂರಾರು ಹಣಕಾಸು ಕಂಪೆನಿಗಳು ಸಾರ್ವಜನಿಕರನ್ನು ವಂಚಿಸಿ ಕೋಟ್ಯಂತರ ರೂ.ಗಳನ್ನು ಸಂಗ್ರಹ ಮಾಡಿಕೊಂಡಿರುತ್ತಾರೆ. ವಂಚನೆಗೆ ಒಳಗಾದ ಸಾವಿರಕ್ಕೂ ಹೆಚ್ಚು ಜನರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಎಂದು ಮನವಿದಾರರು ತಿಳಿಸಿದರು.


ಈ ವಂಚನೆಯನ್ನು ಮನಗಂಡ ಕೇಂದ್ರ ಸರ್ಕಾರ ಇದಕ್ಕಾಗಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 (ಬಡ್ಸ್ಆಕ್ಟ್ ) ಜಾರಿಗೊಳಿಸಿತ್ತು. ರಾಜ್ಯ ಸರ್ಕಾರ ಕೂಡ ಈ ಕಾಯಿದೆಯನ್ನು ಜಾರಿಗೆ ತಂದಿದೆ ಎಂದರು.


ಇದರ ಅನ್ವಯ ವಂಚನೆಗೆ ಒಳಗಾದ ಸಂತ್ರಸ್ತರ ಹಣವನ್ನು ಮರುಪಾವತಿಸಲು ಮತ್ತು ವಂಚಕರನ್ನು ಶಿಕ್ಷಿಸಲು ಅನಕೂಲವಾಗುತ್ತದೆ. ಠೇವಣಿದಾರರ ಹಣವನ್ನು ವಾಪಾಸು ಕೊಡದಿದ್ದರೆ ಅವರಿಗೆ ದಂಡ ಮತ್ತು ಜೈಲುಶಿಕ್ಷೆ ಅಥವಾ ಅವರ ಕಂಪನಿ ವ್ಯವಹಾರ ಮತ್ತು ಆಸ್ತಿಯನ್ನು ಜಪ್ತಿ ಮಾಡಿ ಠೇವಣಿದಾರರಿಗೆ ಹಿಂದಿರುಗಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿ, ವಿಶೇಷ ನ್ಯಾಯಾಲಯ ಒದಗಿಸಲು ಮತ್ತು ಪೊಲೀಸ್ ಅಧೀಕ್ಷಕರನ್ನು ನೇಮಿಸಲು ಅವಕಾಶವಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಈ ಕುರಿತ ನಾಮಫಲಕಗಳು ಕಛೇರಿಯಲ್ಲೂ ಇಲ್ಲ ಎಂದು ಮನವಿದಾರರು ತಿಳಿಸಿದರು.


ಈ ಹಿಂದೆ  ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರು ತಮಗೆ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ವಿಶೇಷ ಕೌಂಟರ್ ತೆರೆಯಬೇಕು ಮತ್ತು 180 ದಿನಗಳಲ್ಲಿ ಹಣ ಮರುಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಡ್ಸ್ ಆಕ್ಟ್ಅನ್ನು ಅನುಷ್ಠಾನ ಮಾಡಲು ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಬಿ. ರಾಜು, ಪೂರ್ಣೇಶ್, ಸುರೇಶ್, ಸೋಮಶೇಖರ್, ಮಮತಾ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!