ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ರಾಹುಲ್ ಗಾಂಧಿ ; ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ – ರಾಗಾ

ಶಿವಮೊಗ್ಗ: ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಸ್ವಲ್ಪ ಕಾಲ ಮಾತುಕತೆ ನಡೆಸಿದ ರಾಹುಲ್, ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತಪಟ್ಟಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಏಳು ಕ್ಷೇತ್ರಗಳಲ್ಲೂ ಗೆಲುವು ತಂದುಕೊಡುವಲ್ಲಿ ನೀವೆಲ್ಲರೂ ಶಕ್ತಿಮೀರಿ ಕೆಲಸ ಮಾಡಬೇಕೆಂದು ಕರೆ ನೀಡಿದರು.


ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಕೇವಲ ಕನಸುಗಳನ್ನು ಬಿತ್ತಿ ಅಧಿಕಾರಕ್ಕೇರಿದ್ದ ಬಿಜೆಪಿ ತನ್ನ ಆಡಳಿತದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಸಮಸ್ಯೆ ಹೇಳಿಕೊಳ್ಳಲು ಬಂದಂತಹ ರೈತರ ಮೇಲೆ ಗೋಲಿಬಾರ್ ಮಾಡಿದೆ. ಹೀಗೆ ಅನೇಕ ಜ್ವಲಂತ ಸಮಸ್ಯೆಗಳಿದ್ದು, ಇವಕ್ಕೆ ಶಾಶ್ವತ ಪರಿಹಾರ ಸಿಗಬೇಕಾದರೆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ ಎಂದರು.


ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ತಂದಂತಹ ಬಡವರ ಪರವಾದ ಹಲವು ಯೋಜನೆಗಳು ಜನರ ಮನದಲ್ಲಿ ನೆಲೆ ನಿಂತಿದೆ ಎಂದ ಅವರು, ಬಿಜೆಪಿ ಸರ್ಕಾರದಲ್ಲಿ ಅಡುಗೆ ಅನಿಲ, ದಿನ ನಿತ್ಯದ ಆಹಾರ ವಸ್ತುಗಳು, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಗಳು ಜನಸಾಮಾನ್ಯರನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ. ಹೀಗಾಗಿ ಈ ಬಾರಿ ಕರ್ನಾಟಕ ರಾಜ್ಯದ ಜನರ ಒಲವು ಕಾಂಗ್ರೆಸ್ ಪರವಾಗಿ ಕಂಡುಬರುತ್ತಿದೆ. ಇದರೊಂದಿಗೆ ಬಿಜೆಪಿಯ ಭ್ರಷ್ಟ ಆಡಳಿತದಿಂದ ಮನನೊಂದ ಬಹುತೇಕ ಬಿಜೆಪಿ ಧುರೀಣರು ಕಾಂಗ್ರೆಸ್‌ಗೆ ಸೇರ್ಪಡೆ ಆಗಿರುವುದು ಆಶಾದಾಯಕ ಬೆಳವಣಿಗೆ ಎಂದರು.


ಈ ಸಂದರ್ಭದಲ್ಲಿ ಕೆ.ಸಿ. ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಎಸ್.ಪಿ. ದಿನೇಶ್, ಎನ್. ರಮೇಶ್, ಎಸ್.ಕೆ. ಮರಿಯಪ್ಪ ಹಾಗೂ ಜಿಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಾದ ಹೆಚ್.ಸಿ. ಯೋಗೀಶ್, ಡಾ ಶ್ರೀನಿವಾಸ ಕರಿಯಣ್ಣ, ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್, ಗೋಣಿ ಮಾಲತೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!