ವೀರಶೈವ ಸಮಾಜ ಒಗ್ಗಟ್ಟಿನ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ ; ಬಿವೈಆರ್

0 66

ಶಿವಮೊಗ್ಗ: ವೀರಶೈವ ಸಮಾಜ ಒಗ್ಗಟ್ಟಿನ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಕುವೆಂಪು ರಂಗಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೀರಶೈವ ಸಮಾಜವನ್ನು ಕಾಣದ ಕೈಗಳು ಒಡೆದಾಳಲು ಯತ್ನಿಸುತ್ತಿವೆ. ಹಾಗಾಗಿ ವೀರಶೈವ ಒಳಪಂಗಡಗಳೆಲ್ಲವೂ ಎಚ್ಚೆತ್ತುಕೊಂಡು ಒಗ್ಗಟ್ಟು ಪ್ರದರ್ಶಿಸಬೇಕಿದೆ. ಅದು ಆದರೆ ಮಾತ್ರ ಸಮಸ್ತ ವೀರಶೈವ ಸಮಾಜವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.


ಶಿವಮೊಗ್ಗ ಎಲ್ಲ ರಂಗಗಳಲ್ಲೂ ಮುಂದುವರಿಯುತ್ತಿದೆ. ರಸ್ತೆ, ರೈಲ್ವೆ, ವಿಮಾನ ಸಂಪರ್ಕವನ್ನೂ ಒಳಗೊಂಡಿದೆ. ಶಿವಮೊಗ್ಗದಲ್ಲೇ ಪಾಸ್‌ಪೋರ್ಟ್ ಕೇಂದ್ರ ತೆರೆದಿರುವುದರಿಂದ ಕಳೆದ 5 ವರ್ಷದಲ್ಲಿ 52 ಸಾವಿರಕ್ಕೂ ಅಧಿಕ ಮಂದಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು, ಯುವಕರು ಉನ್ನತ ವ್ಯಾಸಂಗ, ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಕೇಂದ್ರ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆಗಳು ಹೆಚ್ಚೆಚ್ಚು ಬರಲು ಉತ್ಸುಕವಾಗಿದ್ದು ಹೆಚ್ಚಳದ ಆರ್ಥಿಕತೆಯೂ ಸದೃಢಗೊಳ್ಳಲಿದೆ ಎಂದರು.


ಬಸವಕೇಂದ್ರದ ಶ್ರೀ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ವೀರಶೈವ ಸಮಾಜ ಇಡೀ ದೇಶಕ್ಕೆ ವಿಶೇಷ ಕೊಡುಗೆ ಕೊಟ್ಟಿದೆ. ಸಮಾಜದ ಅನೇಕರು ದೇಶದ ಸಮಗ್ರತೆ, ಐಕ್ಯತೆಗಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ನಮ್ಮ ನೆಲದ ಕೆಳದಿ ಶಿವಪ್ಪನಾಯಕ, ಕೆಳದಿ ಚನ್ನಮ್ಮ ಅವರಂತಹ ಅಪ್ರತಿಮ ವೀರರು ನಮಗೆ ಆದರ್ಶಪ್ರಾಯವಾಗಿದ್ದಾರೆ ಎಂದರು.


ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ವೀರಶೈವ ಸಮಾಜ ಔದಾರ್ಯದ ಸಮಾಜ. ಬಹುದೊಡ್ಡ ಸಮಾಜವು ಹೌದು. ಸಮಾಜದಲ್ಲಿ ಅನೇಕ ಬಡವರಿದ್ದಾರೆ. ಅನೇಕ ವಿಚಾರಗಳಲ್ಲಿ ವಂಚಿತರಾದವರಿದ್ದಾರೆ. ಸಮಾನ ತೆಯ ಸಮಾಜವನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಮಾಜವನ್ನು ಟೀಕೆ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರು ಮಾತನಾಡುತ್ತಿರುವುದು ಓರ್ವ ರಾಜಕಾರಣಿಯಾಗಿ ಅಲ್ಲ. ಸಮಾಜದ ಧ್ವನಿಯಾಗಿ ಮಾತನಾಡಿದ್ದಾರೆ ಇದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಮಾತನಾಡಿ, ಯುವಜನತೆ ದೇಶ ಸೇವೆ ಮಾಡುವ ಅವಕಾಶ ಕಳೆದುಕೊಳ್ಳಬಾರದು. ಇದು ಕೆಳದಿ ಶಿವಪ್ಪನಾಯಕರ ಭೂಮಿ, ಹಾಗಾಗಿ ಪಾಲಕರು ಮಕ್ಕಳಿಗೆ ಸೈನ್ಯಕ್ಕೆ ಸೇರಲು ಪ್ರೋತ್ಸಾಹ ಕೊಡಬೇಕು ಎಂದು ಮನವಿ ಮಾಡಿದರು.
ಭಾರತೀಯ ಸೇನೆಯ ನಿವೃತ್ತ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜುಅವರಿಗೆ ಮಹಾಸಭಾದಿಂದ ಪ್ರಸಕ್ತ ಬಾರಿಯ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಹಾಗೂ 25 ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು. ಇದೇ ವೇಳೆ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾಸಭಾ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಮಹಾಭಾ ರಾಜ್ಯ ಉಪಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಡಾ. ಸರ್ಜಿ, ಎಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಅನಿತಾ ರವಿಶಂಕರ್, ಎನ್.ಜಿ.ರಾಜಶೇಖರ್ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!