ಶಿವಮೊಗ್ಗ : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹೊಸನಗರದ ರಾಮಕೃಷ್ಣ ಶಾಲೆಯ ಆಡಳಿತ ಮಂಡಳಿ ತಮ್ಮ ಇಬ್ಬರು ಮಕ್ಕಳ ಫಲಿತಾಂಶ ತಡೆ ಹಿಡಿದು ಮಕ್ಕಳಿಗೆ ಮನಸಿಕ ಹಿಂಸೆ ನೀಡಿ ದೌರ್ಜನ್ಯ ನಡೆಸಲಾಗಿದೆ ಎಂದು ಸಾಗರ-ಹೊಸನಗರದ ರಾಮಕೃಷ್ಣ ಗುರುಕುಲಾಶ್ರಮದ ಆಜೀವ ಟ್ರಸ್ಟಿ ವಿ.ಸುಧಾಕರ ಗಂಭೀರ ಆರೋಪ ಮಾಡಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಬಿಎಸ್‌ಸಿಯಲ್ಲಿ 3ನೇ ತರಗತಿಯಲ್ಲಿ ಓದುತ್ತಿರುವ ಎಸ್. ನಿರಂಜನ ಹಾಗೂ ಎಲ್‌ಕೆಜಿಯಲ್ಲಿ ಕಲಿಯುತ್ತಿರುವ ಎಸ್. ನರೇಂದ್ರ ಅವರ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಎಲ್ಲಾ ಮಕ್ಕಳ ಫಲಿತಾಂಶವನ್ನು ಪ್ರಕಟಿಸಿದ್ದು, ಅದೇ ಪಟ್ಟಿಯಲ್ಲಿ ನಮ್ಮ ಮಕ್ಕಳ ಹೆಸರೂ ಇದ್ದು, ಬಳಿಕ ವೈಟ್ನರ್ ಹಾಕಿ ಅಳಿಸಲಾಗಿದೆ ಎಂದು ದೂರಿದರು.
ಈ ಬಗ್ಗೆ ಮುಖ್ಯೋಪಾಧ್ಯಾಯರ ಬಳಿ ಪ್ರಶ್ನಿಸಿದರೆ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಿ.ಎಂ ದೇವರಾಜ್ ಸೂಚನೆಯ ಮೇರೆಗೆ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಲಿಖಿತವಾಗಿ ನೀಡುವಂತೆ ಕೋರಿದ್ದರೂ ಕೂಡ ಕೊಡಲು ಬರುವುದಿಲ್ಲ ಎಂದು ಉತ್ತರಿಸಿದ್ದಾರೆ ಎಂದರು.
ಮಕ್ಕಳ ಶುಲ್ಕ ಕಟ್ಟಿಲ್ಲವೆಂದು ಹೇಳಲಾಗುತ್ತಿದೆ. ಆದರೆ ನಾನು ರಾಮಕೃಷ್ಣ ವಿದ್ಯಾಸಂಸ್ಥೆಯ ಸ್ಥಾಪಕ ಟ್ರಸ್ಟಿ ಆಗಿರುವುದರಿಂದ ಶುಲ್ಕ ಭರಿಸುವ ಪ್ರಮೇಯವೇ ಇಲ್ಲ. ಆದರೂ ಕೂಡ ಇಲ್ಲದ ನೆಪ ಹೇಳಿ ಮಕ್ಕಳ ಹಕ್ಕಿಗೆ ಚ್ಯುತಿ ಬರುವಂತೆ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಸಂಸ್ಥೆಯಲ್ಲಿ ಲೆಕ್ಕಪತ್ರ ಕೇಳಿದ್ದಕ್ಕಾಗಿ ಸ್ಥಾಪಕ ಟ್ರಸ್ಟಿಯಾದ
ನನ್ನನ್ನು ಹಾಗೂ ನಗರದ ಎಚ್.ಎನ್. ತಿಮ್ಮಪ್ಪ ಅವರಿಗೆ
ಕೋವಿಡ್ ಸಂದರ್ಭದಲ್ಲಿ ಕಿರುಕುಳ ನೀಡಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಸಂಸ್ಥೆಯ ಹಣಕಾಸಿನ ವ್ಯವಹಾರದಲ್ಲಿ ವಂಚನೆ ಮಾಡಿದ್ದಾರೆ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವುದಾಗಿ ತಿಳಿಸಿದರು.
ಅವರ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ತಮ್ಮನ್ನು ಕೆಲಸದಿಂದ ತೆಗೆಯಲಾಗಿದೆ ಅದೂ ಸಾಲದೆಂಬಂತೆ ಈಗ ಮಕ್ಕಳ ಫಲಿತಾಂಶ ತಡೆ ಹಿಡಿದಿದ್ದಾರೆ. ಇದರಿಂದ ಮಕ್ಕಳು ಮಾನಸಿಕವಾಗಿ ನೊಂದುಕೊಳ್ಳುವಂತಾಗಿದೆ. ಇದರ ವಿರುದ್ಧ ಬಿಇಓ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ. ಮಕ್ಕಳ ಹಕ್ಕು ಆಯೋಗಕ್ಕೂ ದೂರು ನೀಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅವರ ಪತ್ನಿ ಪ್ರೇಮಾ ಹಾಗೂ ಮಗ
ನಿರಂಜನ್ ಇದ್ದರು.