ಶರಾವತಿ ನದಿ ಪಾತ್ರದ ಅಕ್ರಮ ಮರಳು ಗಣಿಗಾರಿಕೆ ತಡೆಯುವಂತೆ ಒತ್ತಾಯ ; ಸಿಎಂಗೆ ಗಿರೀಶ್‌ ಆಚಾರ್ ಪತ್ರ

0 954

ಹೊಸನಗರ : ಹೊಸನಗರ (Hosanagara) ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು (Sand) ಗಣಿಗಾರಿಕೆ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿ ಜನಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರಿಗೆ ಪತ್ರ ಬರೆದಿದ್ದಾರೆ.

ಅವರು ಇತ್ತೀಚೆಗೆ ತಹಸೀಲ್ದಾರ್ ಮೂಲಕ ಪತ್ರವನ್ನು ಕಳುಹಿಸಿದ್ದು, ಶರಾವತಿ ಒಡಲಿನಲ್ಲಿ ನಡೆಯುತ್ತಿರುವ ಮರಳು ಸಾಗಾಟಕ್ಕೆ ಕಡಿವಾಣ ಹಾಕುವಂತೆ ಕೋರಿದ್ದಾರೆ.
ಶರಾವತಿ ನದಿಯ ಈ ಭಾಗದ ಜೀವ ನದಿಯಾಗಿದೆ. ಹಿಂದೆ ಮುಳುಗಡೆಯಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಅಳಿದುಳಿದ ನದಿಯಂಚಿನ ಪ್ರದೇಶವು ಪಶ್ಚಿಮಘಟ್ಟಕ್ಕೆ ಸೇರಿದ ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮರಳು ದಂಧೆಕೋರರು ನದಿ ದಂಡೆಯನ್ನೆಲ್ಲಾ ಒಡೆದು ಹಾಕಿ, ನದಿಯಂಚಿನ ಕಾಡುಗಳನ್ನು ಧ್ವಂಸಗೊಳಿಸಿ, ವಾಹನ ಸಂಚರಿಸುವ ರಸ್ತೆ ನಿರ್ಮಾಣ ಮಾಡಿಕೊಂಡು, ಪ್ರತಿನಿತ್ಯ ಹಗಲು ಇರುಳೆನ್ನದೆ, ನೂರಾರು ಲೋಡ್ ಅಕ್ರಮ ಮರಳು ಸಂಗ್ರಹ ಹಾಗು ಸಾಗಾಟ ಮಾಡುತಿದ್ದಾರೆ.

ಬಿಹಾರ, ಉತ್ತರ ಪ್ರದೇಶದಿಂದ ಕೂಲಿ ಆಳುಗಳನ್ನು ಕರೆಸಿಕೊಂಡು ನದಿಯಲ್ಲಿ ಮುಳುಗಿಸಿ, ನದಿಯಾಳದಿಂದ ಮರಳನ್ನು ತೆಗೆಯಲು ದಂಧೆಕೋರರು ಸೂಚಿಸುತ್ತಾರೆ.

ಈ ಕೂಲಿ ಆಳುಗಳಿಗೆ ಜೀವ ರಕ್ಷಣೆ ಇಲ್ಲದಂತಾಗಿದೆ. ಇದರಿಂದಾಗಿ ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಜೀವ ಹಾನಿಯಾದಲ್ಲಿ ನಮ್ಮ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇದರಿಂದಾಗಿ ಸರ್ಕಾರಕ್ಕೆ ಸೇರ ಬೇಕಾದ ರಾಜಧನ ಕೋಟ್ಯಂತರ ರೂ.ಗಳು ನಷ್ಟವಾಗುವುದರ ಜೊತೆಗೆ, ಬೆಲೆ ಕಟ್ಟಲಾಗದ ಅರಣ್ಯ ಸಂಪತ್ತು ನಶಿಸಿಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

ನದಿ ದಂಡೆಯನ್ನು ಒಡೆದು ಹಾಕಿದ ಮಣ್ಣನ್ನು ನದಿಯಲ್ಲಿ ರಸ್ತೆ ನಿರ್ಮಾಣ ಮಾಡಿದಾಗ ಮಳೆಗಾಲದಲ್ಲಿ ತೊಳೆದುಹೋದಲ್ಲಿ, ಕೋಟ್ಯಂತರ ರೂ.ಗಳ ವಿದ್ಯುತ್ ಉತ್ಪಾದಿಸುವ ಯಂತ್ರಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ಅಲ್ಲದೆ, ಪರಿಸರಕ್ಕೆ ತುಂಬಾ ಹಾನಿಯಾಗುತ್ತಿರುವ ವಿಷಯದ ಕುರಿತು ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿರುತ್ತದೆ.

ಈ ಅಧಿಕಾರಿಗಳು ನೆಪಕಷ್ಟೆ ಬೆರಳೆಣಿಕೆಯಷು ವಾಹನವನ್ನು ತಪಾಸಣೆ ಮಾಡಿ, ಕಾನೂನು ಕ್ರಮಕೈ ಗೊಂಡಿರುವುದು ಕಂಡು ಬಂದಿರುತ್ತದೆ. ಅತ್ಯಂತ ಮುಖ್ಯವಾಗಿ ಸರ್ಕಾರದ ಸಂಪತ್ತನ್ನು ರಕ್ಷಿಸುವುದು ತಾಲ್ಲೂಕಿನ ಪ್ರಥಮ ಪ್ರಜೆಗಳು ಹಾಗೂ ಗಣಿ, ಇಲಾಖೆ ಅರಣ್ಯ, ಕಂದಾಯ, ಅಧಿಕಾರಿಗಳ ಮಹತ್ವದ ಜವಾಬ್ದಾರಿಯಾಗಿದ್ದರೂ ಸಹ ಸರ್ಕಾರದ ಆದೇಶವನ್ನು ಪಾಲನೆ ಮಾಡದೆ, ಅಕ್ರಮ ಮರಳು ದಂದೆ ಕೋರರ ಜೊತೆಯಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಅತೀಸೂಕ್ಷ್ಮ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Leave A Reply

Your email address will not be published.

error: Content is protected !!