ಶರಾವತಿ ಸಂತ್ರಸ್ತರ ಪ್ರಕರಣ
ಸುಪ್ರೀಂಕೋರ್ಟ್‌ಗೆ ಐ.ಎ. ಸಲ್ಲಿಕೆ ; ಈಶ್ವರ ಖಂಡ್ರೆ

0 9

ಶಿವಮೊಗ್ಗ ; ಶರಾವತಿ ಕಣಿವೆ ಜಲವಿದ್ಯುತ್‌ ಯೋಜನೆ ಭೂ ಮಂಜೂರಾತಿ ಉದ್ದೇಶಕ್ಕಾಗಿ ಸರ್ಕಾರ ಮಾಡಿದ್ದ ಡಿನೋಟಿಫಿಕೇಷನ್‌ ಆದೇಶವನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದು, ಸುಪ್ರೀಂಕೋರ್ಟ್ ಗೆ ನಿಯಮಾನುಸಾರ ಐ.ಎ. ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಕರೆದಿದ್ದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಈಶ್ವರ ಖಂಡ್ರೆ 1978ಕ್ಕೆ ಮೊದಲು ಮೂರು ತಲೆಮಾರುಗಳ ಕಾಲ ಅರಣ್ಯ ಭೂಮಿಯಲ್ಲಿ ವಾಸಿಸುತ್ತಿರುವ ಕುರಿತಂತೆ ದಾಖಲಾತಿ ಒದಗಿಸುವ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ಕಾಯಿದೆ ಅಡಿ ಭೂ ಮಂಜೂರಾತಿಗೆ ಅವಕಾಶವಿದ್ದು, ಜಾಗ ಗುರುತಿಸಿ ಪರಿಹಾರ ಕಲ್ಪಿಸಬೇಕಿದೆ ಎಂದರು.


ಹಲವು ಕಡೆ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳೆರಡಕ್ಕೂ ಒಂದೇ ಸರ್ವೇ ನಂಬರ್ ಇರುವ ಹಿನ್ನೆಲೆಯಲ್ಲಿ ಹಾಗೂ ಜಂಟಿ ಸರ್ವೆ ನಡೆಯದಿರುವ ಕಾರಣ ಗೊಂದಲ ಇದೆ. ಇದನ್ನು ಪರಿಹರಿಸಲು ಜಂಟಿ ಸರ್ವೆಯೇ ಪರಿಹಾರವಾಗಿದೆ. ಈ ಕುರಿತಂತೆ ಕಂದಾಯ ಸಚಿವರೊಂದಿಗೆ ಸಮಾಲೋಚಿಸಿ ಸಾಧ್ಯವಾದಷ್ಟು ಬೇಗ ಜಂಟಿ ಸಮೀಕ್ಷೆ ನಡೆಸಲಾಗುವುದು ಎಂದರು.


ಸಭೆಯಲ್ಲಿ ಸಚಿವರಾದ ಮಧು ಬಂಗಾರಪ್ಪ, ಬಿ.ನಾಗೇಂದ್ರ, ಮಲೆನಾಡು ಭಾಗದ ಶಾಸಕರುಗಳಾದ ಶಾರದಾ ಪೂರ್ಯನಾಯಕ್, ಭೀಮಣ್ಣ ನಾಯ್ಕ, ಬೇಳೂರು ಗೋಪಾಲಕೃಷ್ಣ, ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!