ಶಾಲಾ ಮಕ್ಕಳಿಗೆ ನ. 23 ರಿಂದ ಮೊಟ್ಟೆ ಜೊತೆಗೆ ವಿಶೇಷ ಪೌಷ್ಠಿಕಾಂಶವುಳ್ಳ ಆಹಾರ ನೀಡಲು ತೀರ್ಮಾನ ; ಸಚಿವ ಮಧು ಬಂಗಾರಪ್ಪ

0 3,956

ಶಿವಮೊಗ್ಗ : ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ನ. 23 ರಿಂದ ಮೊಟ್ಟೆಯ ಜೊತೆಗೆ ವಿಶೇಷ ಪೌಷ್ಠಿಕಾಂಶವುಳ್ಳ ಆಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರಾ. ಮತ್ತು ಪ್ರೌ. ಶಿಕ್ಷಣ ಸಚಿವ‌ ಮಧು ಬಂಗಾರಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಆಹಾರ ಮತ್ತು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗಿದೆ ಎಂದರು.


ರಾಜ್ಯದಲ್ಲಿ 9 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ಹೈದರಾಬಾದ್ ಕರ್ನಾಟಕ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹುದ್ದೆಗಳನ್ನು ಭರ್ತಿ‌ ಮಾಡಲಾಗುತ್ತಿದೆ. ಮುಂದಿನ ವರ್ಷದಲ್ಲಿ ಕೂಡ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಲು ತೀರ್ಮಾನಿಸಿದೆ ಎಂದರು.


ಇನ್ನು ಮುಂದೆ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬಳಿ ಶೌಚಾಲಯಗಳನ್ನು ಸ್ವಚ್ಛತೆ ಮಾಡಿಸುವಂತಿಲ್ಲ. ಮಾಡಿಸಿದಲ್ಲಿ ಸಂಬಂಧಪಟ್ಟ ಶಾಲಾ ಪ್ರಮುಖರ ಮೇಲೆ ಕ್ರಮ ಕೈಗೊಳ್ಳಲಾಗುವುದು. 50 ಮಕ್ಕಳಿಗಿಂತ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳಿಗೆ ವಾರ್ಷಿಕ 10 ಸಾವಿರ ರೂ.ಗಳನ್ನು ಸರ್ಕಾರ ಸ್ವಚ್ಛತೆಗಾಗಿ ನೀಡುತ್ತಿತ್ತು. ಅದು ತುಂಬಾ ಕಡಿಮೆ ಎಂಬ ಅರಿವು ನಮಗಿದೆ. ಅದನ್ನು ಮುಖ್ಯಮಂತ್ರಿಗಳು 20 ಸಾವಿರ ರೂ.ಗೆ ನ.23ರಿಂದ ಮಕ್ಕಳಿಗೆ ವಿಶೇಷ ಪೌಷ್ಠಿಕ ಆಹಾರ ಯೋಜನೆ ಹೆಚ್ಚಳ ಮಾಡಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಸ್ವಚ್ಛತೆಗೆ ಗಮನ ಕೊಡಲಾಗುವುದು.
– ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಬರಗಾಲ ಭೀಕರವಾಗಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಶರಾವತಿ ನದಿಯಲ್ಲಿ ನೀರಿನ ಸಂಗ್ರಹ ಇದೆ. ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಆದರೂ ಬೇಸಿಗೆಯಲ್ಲಿ ಕೊರತೆಯಾಗದಂತೆ ಶಿರಾಳಕೊಪ್ಪ, ಸೊರಬ ಮತ್ತು ಇತರ ಕಡೆಗಳಲ್ಲಿ ಶರಾವತಿಯಿಂದ ನೀರನ್ನು ಲಿಫ್ಟ್ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

351 ಹಳ್ಳಿಗಳಿಗೆ ಸುಸಜ್ಜಿತವಾಗಿ ಕುಡಿಯುವ ನೀರಿನ ಯೋಜನೆಯನ್ನು ಮಾಡಲಾಗಿದೆ. ವಿದ್ಯುತ್ ಸಮಸ್ಯೆಗೂ ಕೂಡ ಸಚಿವರೊಂದಿಗೆ ಚರ್ಚಿಸಲಾಗಿದೆ. ಅವರು ಜಿಲ್ಲೆಗೆ ಬರುವ ಕಾರ್ಯಕ್ರಮವಿತ್ತು. ತುರ್ತು ಕಾರಣದಿಂದ ದೆಹಲಿಗೆ ತೆರಳಿದ್ದು, ಮೆಸ್ಕಾಂ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ನಿರಂತರವಾಗಿ ಕೃಷಿಗೆ 5 ಗಂಟೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.


ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಟ್ಟದಲ್ಲಿ ತನಿಖೆಗೆ ಈಗಾಗಲೇ ತೀರ್ಮಾನಿಸಲಾಗಿದೆ. ಏಕೆಂದರೆ 1500 ಕ್ಕೂ ಅಧಿಕ ಅರ್ಜಿದಾರರು ಸ್ಮಾರ್ಟ್ ಸಿಟಿ ಬಗ್ಗೆ ದೂರು ದಾಖಲಿಸಿದ್ದರು. ಇದು ಸಾವಿರ ಕೋಟಿ ಬೃಹತ್ ಮೊತ್ತದ ಯೋಜನೆಯಾಗಿದ್ದು, ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಏಜೆನ್ಸಿಯವರು ಈಗಾಗಲೇ ಕೆಲಸ ಮುಗಿಸಿ ಹೋಗಿದ್ದು, ಆತನಿಗೂ ನೋಟಿಸ್ ನೀಡಿ ಕರೆಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಕಳಪೆಯಾಗಲು ಕಾರಣರಾದ ದೊಡ್ಡ ಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾವಿರ ಕೋಟಿ ರೂ. ನಲ್ಲಿ ಸಿಂಗಾಪೂರ ಮಾಡಬಹುದಿತ್ತು. ಆದರೆ, ದುರಾದೃಷ್ಟವಶಾತ್ ಆಗಿಲ್ಲ ಎಂದರು.

ಸಚಿವ ಎಂ.ಬಿ. ಪಾಟೀಲ್ ಅವರು ಕರ್ನಾಟಕಕ್ಕೆ ಬಸವನಾಡು ಎಂದು ಹೆಸರಿಡಲು ಒತ್ತಾಯಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾವೆಲ್ಲರೂ ಬಸವಣ್ಣನವರ ಮಾರ್ಗದರ್ಶನದಲ್ಲೇ ನಡೆಯುವವರು. ಹೆಸರು ಬದಲಾವಣೆ ಅವಶ್ಯಕತೆ ಇಲ್ಲ ಎಂದರು.

ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವರ ಭ್ರಷ್ಟಾಚಾರದ ಬಗ್ಗೆ ಆಣೆ ಪ್ರಮಾಣ ಮಾಡುವ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಮುಖ್ಯಮಂತ್ರಿಗಳು ತುಂಬಾ ಕೆಲಸ ಕೊಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಭ್ರಷ್ಟಾಚಾರ ಮಾಡಿದ್ದರೆ ದೂರು ನೀಡಿದರೆ ತನಿಖೆಯಾಗಲಿ ಎಂದರು.

ಶಿವಮೊಗ್ಗ -ಭದ್ರಾವತಿ ಸರ್ಕಾರಿ ಸಿಟಿಬಸ್ ಗಳ ಸಂಚಾರ ಇಲ್ಲ. ಊರುಗಡೂರು ಮತ್ತು ವಾಜಪೇಯಿ ಲೇಔಟ್ ಜಲವು ವರ್ಷಗಳಿಂದ ನಿಂತಿದ್ದು, ಹೊಸ ಜಿಲ್ಲಾಡಳಿತ ಭವನ ನಿರ್ಮಾಣದ ಪ್ರಸ್ತಾವನೆ ನಿಂತಿದೆ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿ ಮುಂದಿನ ಕೆಡಿಪಿ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಮೇಶ್ ಹೆಗ್ಡೆ, ಜಿ.ಡಿ. ಮಂಜುನಾಥ್ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!