ಶಾಸಕ ಗೋಪಾಲಕೃಷ್ಣ ಮತ್ತು ಜ್ಞಾನೇಂದ್ರ ನೇತೃತ್ವದಲ್ಲಿ ಅಧಿಕಾರಿ ಮಟ್ಟದ ಸಭೆ | ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ

0 611

ಹೊಸನಗರ: ಬರದ (Drought) ಸಮಸ್ಯೆ ಎದುರಾಗಿದೆ. ಸಾರ್ವಜನಿಕರಿಂದ ಕುಡಿವ ನೀರಿನ (Drinking water) ಸಮಸ್ಯೆ ಕುರಿತು ದೂರುಗಳ ಬಾರದಂತೆ ಅಧಿಕಾರಿ ವರ್ಗ ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬೇಕಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ತಿಳಿಸಿದರು.


ಇಲ್ಲಿನ ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬರ ನಿರ್ವಹಣೆ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲು ಸರಕಾರ ಬದ್ಧವಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.


ಹಳ್ಳಿಗಳಲ್ಲಿ ದೂರದ ಮನೆಗಳು ಇರುವುದು ನಲ್ಲಿ ಸಂಪರ್ಕ ಕಲ್ಪಿಸಲು ತೊಡಕಾಗಿದೆ. ಜೆಜೆಎಂ ಯೋಜನೆಯಡಿ ವರಾಹಿ ಜಲಾಶಯದಿಂದ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ. ಆದರೆ ಅಲ್ಲಿಯವರೆಗೆ ಸಮಸ್ಯೆ ಆಗದಂತೆ ನಿರ್ವಹಿಸುವ ನೋಡಿಕೊಳ್ಳಬೇಕಿದೆ. ಲಭ್ಯವಿರುವ ಅನುದಾನ ಬಳಸಿಕೊಂಡು ಕೊಳವೆ ಬಾವಿ ಅಗತ್ಯವಿರುವ ಕಡೆಗಳಲ್ಲಿ ಕಾಮಗಾರಿ ಕೈಗೊಳ್ಳಿ. ನೀರು ಸರಬರಾಜು ವ್ಯವಸ್ಥೆಗೆ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಆದ್ಯತೆ ನೀಡಿ. ತೀರಾ ಸಮಸ್ಯೆ ಉಂಟಾದ ಪ್ರದೇಶಗಳಲ್ಲಿ ಖಾಸಗಿಯಾಗಿ ನೀರು ಖರೀದಿಸಲು ಲಭ್ಯವಿರುವ ಸಂಪನ್ಮೂಲಗಳ ಕಡೆಯೂ ಗಮನ ಹರಿಸಿ. ಎಲ್ಲವನ್ನೂ ನಿಯಮದಲ್ಲಿ ಅವಕಾಶವಿಲ್ಲ ಎಂದು ಕೈಚೆಲ್ಲಬೇಡಿ. ಮಾನವೀಯತೆಯ ಆಧಾರದಲ್ಲಿ ಜನಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಶಾಸಕ ಆರಗ ಜ್ಞಾನೇಂದ್ರ (Araga Jnanendra) ಮಾತನಾಡಿ, ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ನೀರಿನ ಸಮಸ್ಯೆ ಭೀಕರವಾಗಿ ತಲೆದೋರುವ ಲಕ್ಷಣಗಳಿವೆ. ಕಠಿಣ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿವರ್ಗ ಎಲ್ಲ ರೀತಿಯಲ್ಲಿಯೂ ಸಜ್ಜಾಗಬೇಕಿದೆ. ಪ್ರಸ್ತುತ ಜೆಜೆಎಂ ನಲ್ಲಿ ಮಾತ್ರ ಅನುದಾನ ಲಭ್ಯವಿದೆ. ಬರದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಜೆಜೆಎಂ ಅನುದಾನ ಬಳಸಿ ಅಗತ್ಯಕ್ರಮ ಕೈಗೊಳ್ಳಿ ಎಂದರು.


ಸಭೆಯಲ್ಲಿ ತಾಲೂಕು ಪಂಚಾಯಿತಿ ಇಓ ನರೇಂದ್ರಕುಮಾರ್, ತಹಸೀಲ್ದಾರ್ ರಶ್ಮಿ, ಮೆಸ್ಕಾಂ ಎಇಇ ಚಂದ್ರಶೇಖರ, ಗ್ರಾಮ ಪಂಚಾಯಿತಿ ಪಿಡಿಓಗಳು ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಮಂಜುನಾಥ್ ಕಟ್ಟೆ, ಗುಮಾಸ್ಥರಾದ ಚಿರಾಗ್ ಇನ್ನೂ ಮುಂತಾದ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!