ಶಿವಮೊಗ್ಗ ಘಟನೆ ; ಎಸ್‌ಪಿ ಏನಂದ್ರು…?

0 5,761

ಶಿವಮೊಗ್ಗ : ಶಾಂತಿನಗರ-ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿ, ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಇದರಿಂದ ಕೆಲ ವಾಹನ, ಮನೆ ಜಖಂಗೊಂಡಿದೆ. ಪೊಲೀಸರು ಸೇರಿದಂತೆ ಕೆಲವರ ಮೇಲೆ ಕಲ್ಲು ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ವಿಡಿಯೋ ಹಾಗೂ ಮಾಹಿತಿ ಆಧರಿಸಿ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. 2 RAF ತುಕಡಿ, 20 KSRP, 500 ಗೃಹ ರಕ್ಷಕದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ

ಕಲ್ಲು ಏಟು ಬಿದ್ದಿರುವ ಪೊಲೀಸ್ ಸಿಬ್ಬಂದಿಯಿಂದಲೂ ದೂರು ಪಡೆದು ಪ್ರಕರಣ ದಾಖಲಿಸಲಾಗುತ್ತದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಶಾಂತಿನಗರ-ರಾಗಿಗುಡ್ಡ ಹೊರತುಪಡಿಸಿ ಉಳಿದೆಡೆ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಶಾಂತಿನಗರ-ರಾಗಿಗುಡ್ಡದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಹಿನ್ನೆಲೆ ಶಿವಮೊಗ್ಗ ನಗರದ್ಯಾಂತ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಆದೇಶ ಹೊರಡಿಸಲಾಗಿದೆ.


144 ಸೆಕ್ಷನ್ ಜಾರಿ

01-10-2023 ರ ರಾತ್ರಿ 12ಗಂಟೆಯಿಂದಲೇ 144 ಸೆಕ್ಷನ್ ಜಾರಿಗೆ ಬಂದಿದೆ. ಪರಿಸ್ಥಿತಿ ಸಂಪೂರ್ಣವಾಗಿ ಪೊಲೀಸರ ಹಿಡಿತಕ್ಕೆ ಬರುವವರೆಗೂ ಶಿವಮೊಗ್ಗ ಮಹಾನಗರ ಪಾಲಿಕೆ ಪ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

10 ಜನರು ಪೊಲೀಸರ ವಶಕ್ಕೆ

ಗಲಾಟೆಯಲ್ಲಿ ಒಟ್ಟೂ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ 5 ಮಂದಿಗೆ ಗಾಯವಾಗಿದ್ದು, ಖುದ್ದು ಪೊಲೀಸರೇ ಅವರನ್ನು ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave A Reply

Your email address will not be published.

error: Content is protected !!