ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ; ಗೆಲುವು ಯಾರಿಗಾಯ್ತು ?

0 14

ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಪ್ರಭಾರ ಅಧ್ಯಕ್ಷರಾಗಿ ಹೆಚ್.ಎಲ್. ಷಡಾಕ್ಷರಿ ಆಯ್ಕೆಯಾಗಿದ್ದಾರೆ.


ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಅವರ ವಿರುದ್ಧ ಇಂದು ಡಿಸಿಸಿ ಬ್ಯಾಂಕ್ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ನಿರ್ಣಯವನ್ನು ಮತಕ್ಕೆ ಹಾಕಲಾಗಿದ್ದು, 13 ಮಂದಿ ಮತದಾನದಲ್ಲಿ ಭಾಗವಹಿಸಿದ್ದರು. ಒಬ್ಬರು ಮುಚ್ಚಿದ ಲಕೋಟೆ ನೀಡಿದರು. ಅವಿಶ್ವಾಸ ನಿರ್ಣಯದ ಪರ 9 ಮತಗಳು ಹಾಗೂ ಅಧ್ಯಕ್ಷರ ಪರ 3 ಮತಗಳು ಚಲಾಯಿಸಲ್ಪಟ್ಟವು. ನಾಮನಿರ್ದೇಶಿತ ಸದಸ್ಯರಿಗೆಮತದಾನದ ಹಕ್ಕು ಇರಲಿಲ್ಲ.
ಅಧ್ಯಕ್ಷರ ಪರವಾಗಿ ಬಿ.ಡಿ. ಭೂಕಾಂತ್, ಅಗಡಿ ಅಶೋಕ್ ಮತ್ತು ಅಧ್ಯಕ್ಷ ಚನ್ನವೀರಪ್ಪ ಮತ ಚಲಾಯಿಸಿದ್ದರು.

ಅವಿಶ್ವಾಸ ನಿರ್ಣಯದ ಪರವಾಗಿ ಹೆಚ್.ಎಲ್. ಷಡಾಕ್ಷರಿ, ಹೆಚ್.ಎನ್. ವಿಜಯದೇವ್. ದುಗ್ಗಪ್ಪಗೌಡ, ವೆಂಕಟೇಶ್, ಎಸ್.ಪಿ. ದಿನೇಶ್, ಯೋಗೀಶ್, ಶ್ರೀಪಾದ ರಾವ್ ನಿಸರಾಣಿ, ಪರಮೇಶ್ ಮತ ಚಲಾಯಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ವೆಂಕಟಾಚಲಪತಿ ಕಾರ್ಯನಿರ್ವಹಿಸಿದ್ದರು.


ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ಮುಖ್ಯದ್ವಾರ ಹಾಗೂ ಸುತ್ತಮುತ್ತ ಪೊಲೀಸ್ ಬಿಗಿ ಪಹರೆ ಕೈಗೊಳ್ಳಲಾಗಿತ್ತು.


ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಆರ್.ಎಂ. ಮಂಜುನಾಥ ಗೌಡ, ಹೆಚ್.ಎಸ್. ಸುಂದರೇಶ್, ಪಿ.ಒ.ಶಿವಕುಮಾರ್, ವಿದ್ಯಾಧರ ಮೊದಲಾದವರು ಇದ್ದರು.

Leave A Reply

Your email address will not be published.

error: Content is protected !!