ಶಿವಮೊಗ್ಗ ದಸರಾ | ಮೂರು ಆನೆಗಳು ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿವೆ

0 46

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಹಮ್ಮಿಕೊಂಡಿರುವ ದಸರಾ ಉತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಸಕ್ರೆಬೈಲಿನ ಆನೆಬಿಡಾರದ ಮೂರು ಆನೆಗಳು ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವುದು ವಿಶೇಷ ಆಕರ್ಷಣೆಯಾಗಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಯು.ಹೆಚ್. ವಿಶ್ವನಾಥ್ ತಿಳಿಸಿದರು.


ಅವರು ಶನಿವಾರ ಪಾಲಿಕೆ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಯ ಸಹಕಾರದೊಂದಿಗೆ ಪ್ರತಿ ವರ್ಷವೂ ಮೂರು ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ವರ್ಷ ಪಾಲ್ಗೊಳ್ಳುವ ಸಾಗರ್, ನೇತ್ರಾವತಿ ಹಾಗೂ ಹೇಮಾವತಿ ಆನೆಗಳನ್ನು ಅ.20ರಂದು ಸಂಜೆ 5-30ಕ್ಕೆ ವಾಸವಿ ಪಬ್ಲಿಕ್ ಶಾಲೆ ಆವರಣದಲ್ಲಿ ಸ್ವಾಗತಿಸಲಾಗುವುದು ಎಂದರು.


ಅ.20ರಂದು ಆಗಮಿಸಲಿರುವ ಆನೆಗಳು ಮೂರು ದಿನಗಳ ಕಾಲ ವಾಸವಿ ಪಬ್ಲಿಕ್ ಶಾಲೆಯಿಂದ ಫ್ರೀಡಂ ಪಾರ್ಕ್ವರೆಗೆ ತಾಲೀಮು ನಡೆಸಲಿವೆ. ಅ.15ರಿಂದ 24ರ ವರೆಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ರಕ್ಷಣೆ ಹಾಗೂ ಭದ್ರತೆ ಒದಗಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.


ಅ.24ರ ಮಧ್ಯಾಹ್ನ 2-30ಕ್ಕೆ ದಸರಾ ಉತ್ಸವ ಮೆರವಣಿಗೆಗೆ ನಂದೀಧ್ವಜ ಪೂಜೆಯನ್ನು ಕೋಟೆ ಶ್ರೀ ಆಂಜನೇಯ ದೇವಸ್ಥಾನದ ಎದುರು ಮೇಯರ್ ಎಸ್. ಶಿವಕುಮಾರ್ ಸಲ್ಲಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ. ಚುನಾಯಿತ ಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಂತರ ನಡೆಯುವ ರಾಜಬೀದಿ ಉತ್ಸವದಲ್ಲಿ ವೀರಗಾಸೆ, ಚಂಡೆ, ಕೀಲುಕುದುರೆ, ಡೊಳ್ಳು, ಯಕ್ಷಗಾನ ಬೊಂಬೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ಮೆರವಣಿಗೆ ಹೊರಟು ಬನ್ನಿ ಮುಡಿಯುವ ಸ್ಥಳವಾದ ಫ್ರೀಡಂ ಪಾರ್ಕಿಗೆ ತಲುಪಲಿದೆ ಎಂದರು.


ಸುಮಾರು 205 ದೇವಾನುದೇವತೆಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿಯ ಅಲಂಕಾರಕ್ಕಾಗಿ ಪ್ರತಿ ವರ್ಷದಂತೆ ಗೌರವ ಧನ ನೀಡಲಾಗುತ್ತಿದೆ ಎಂದ ಅವರು, ತಹಶೀಲ್ದಾರ್ ಅವರು ಸಂಜೆ 6-30ಕ್ಕೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ನಂತರ ಆಕರ್ಷಕ ಪಟಾಕಿ-ಸಿಡಿಮದ್ದು, ರಾವಣದಹನ ನಡೆಯಲಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಸ್. ಜ್ವಾನೇಶ್ವರ್, ಎಸ್.ಎನ್. ಮಂಜುನಾಥ್, ಎಸ್.ಜಿ. ರಾಜು, ಲಕ್ಷ್ಮಿ ಶಂಕರ ನಾಯಕ, ಅನಿತಾ ರವಿಶಂಕರ್, ರೇಖಾ ರಂಗನಾಥ್ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!