ಶಿವಮೊಗ್ಗ ರೈತ ದಸರಾ | ರೈತರು ಹಣದ ಹಿಂದೆ ಬೀಳದೆ ಆಹಾರ ಬೆಳೆಗಳಿಗೆ ಒತ್ತು ಕೊಡಬೇಕು ; ಜ್ಞಾನೇಶ್
ಶಿವಮೊಗ್ಗ: ರೈತರು ಹಣದ ಹಿಂದೆ ಬೀಳದೆ ಆಹಾರ ಬೆಳೆಗಳಿಗೆ ಒತ್ತು ಕೊಡಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕೃಷಿಕ, ಚಿತ್ರದುರ್ಗದ ಕೆ.ಆರ್. ಜ್ಞಾನೇಶ್ ಹೇಳಿದರು.
ಅವರು ಇಂದು ರೈತರು ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರು ಹಣದ ಹಿಂದೆ ಬಿದ್ದಿದ್ದಾರೆ. ಶಿವಮೊಗ್ಗದಲ್ಲಿ ಅಡಿಕೆ ಬೆಳೆದು ರೈತರು ಹಣ ಸಂಪಾದನೆ ಮಾಡಿರುವುದು ನೋಡಿ ನಮ್ಮ ಬಯಲುಸೀಮೆ ರೈತರು ಕೂಡ ನಾವೇನು ಕಡಿಮೆ ಎಂದು ಅಡಿಕೆ ನಾಟಿ ಮಾಡುತ್ತಿದ್ದೇವೆ. ರಾಗಿ, ಜೋಳ, ಭತ್ತ, ಹೆಸರು, ಹುರುಳಿ ಇವೆಲ್ಲಾ ಬಿಟ್ಟು ಅಡಿಕೆ ಹಿಂದೆ ಬಿದ್ದಿದ್ದಾರೆ ಎಂದರು.
ರುಚಿ ಮತ್ತು ಬುದ್ಧಿ ಎರಡೂ ಬದಲಾವಣೆ ಆಗಿರುವುದರಿಂದ ಹಣದ ಹಿಂದೆ ಬಿದ್ದಿದ್ದೇವೆ. ಹಸು ಸಾಕಾಣಿಕೆ ನಿಂತು ಹೋಗುತ್ತಿದೆ. ದೇಸೀ ಹಸು ಒಂದು ಅಥವಾ ಅರ್ಧ ಲೀಟರ್ ಹಾಲು ಕೊಡುತ್ತೆ ಅಂತ ಹೆಚ್‌ಎಫ್-ಜರ್ಸಿ ಹಿಂದೆ ಬಿದ್ದಿದ್ದೇವೆ. ಮನೆಯಲ್ಲಿ ಬೆಳೆದ ಧಾನ್ಯದ ಬೀಜಕ್ಕೆ ಹುಳು ಬೀಳುತ್ತೆ ಅಂತ ಎಲ್ಲಾ ಮಾರಾಟ ಮಾಡಿ ಸರ್ಕಾರದ ಮುಂದೆ ಕೈಯೊಡ್ಡುತ್ತಿದ್ದೇವೆ. ಈಗ ಕಣವೂ ಇಲ್ಲ, ರಾಶಿ ಪೂಜೆಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೊದಲು ನನ್ನ ಮನೆ ಕುಟುಂಬಕ್ಕೆ ಬೇಕಾದುದನ್ನು ಬೆಳೆದು ಉಳಿದ್ದನ್ನು ಮಾರಾಟ ಮಾಡಿ. ಬಹುಬೆಳೆ ಬೆಳೆಸುವುದನ್ನು ರೂಢಿ ಮಾಡಿ. ಒಂದೇ ಬೆಳೆ ಬೆಳೆದು ಉಳಿದದ್ದೆಲ್ಲವನ್ನೂ ಹೆಚ್ಚಿನ ದರಕ್ಕೆ ಕೊಂದು ತರುವುದನ್ನು ನಿಲ್ಲಿಸಿ ಎಂದರು.
ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಮಾರಾಟ ಮಾಡಬೇಕು ಎಂದು ಕರೆ ನೀಡಿದ ಜ್ಞಾನೇಶ್, ಮೊಬೈಲ್ ಇರುವುದು ಕೇವಲ ಯಾವುದೋ ವಾಹನ, ಸ್ಥಳಗಳ ಮುಂದೆ ನಿಂತು ಫೋಟೋ ತೆಗೆದುಕೊಂಡು ಸ್ಟೇಟಸ್ ಹಾಕುವುದಕ್ಕಲ್ಲ. ನೀವು ಬೆಳೆದಿರುವ ಫಸಲು, ಇಂತದ್ದು ಇದೆ. ದರ ಇಷ್ಟು ಎಂದು ಹಾಕಿ. ನಿಮ್ಮ ಬಳಗದವರಿಗೇ ಮೊದಲು ಮಾರಾಟ ಮಾಡಿ.
ಎಪಿಎಂಸಿಗೆ ತರಕಾರಿ ತಗೊಂಡು ಬೆಳಿಗ್ಗೆ 3 ಗಂಟೆಗೆಲ್ಲಾ ಯಾಕೆ ಬರ್ತೀರಿ? ಬೆಳಿಗ್ಗೆ 6 ಗಂಟೆಗೆ ಬಂದು ನೀವೇ ಸಂತೆ ಮಾಡಿ. ನಮ್ಮ ಬೆಳೆಗೆ ನಾವೇ ದರ ನಿಗದಿ ಮಾಡಬೇಕು. ಸರ್ಕಾರಕ್ಕೆ ದರ ಕೇಳುವುದಲ್ಲ ಎಂದು ಕುಟುಕಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಆಹಾರ ದಸರಾ ಸಮಿತಿ ಅಧ್ಯಕ್ಷೆ ಮೆಹಕ್ ಷರೀಫ್, ಸದಸ್ಯರಾದ ಯೋಗೀಶ್, ವಿಶ್ವನಾಥ್, ಸುನೀತಾ ಅಣ್ಣಪ್ಪ, ನಾಗರಾಜ ಕಂಕಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.