ಶಿವಮೊಗ್ಗ : ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಲಕ್ಷಾಂತರ ಜನರನ್ನು ಕರೆತರಲಾಗಿತ್ತು. ಇದಕ್ಕಾಗಿ ಸಾವಿರಾರು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಈ ಬಸ್‌ಗಳ ಖರ್ಚು ವೆಚ್ಚದ ಕುರಿತು ಕಾನೂನು ವಿದ್ಯಾರ್ಥಿಯೊಬ್ಬರು ಮಾಹಿತಿ ಹಕ್ಕು ಅಡಿ ಮಾಹಿತಿ ಪಡೆದಿದ್ದಾರೆ.
ಶಿವಮೊಗ್ಗದ ಕಾನೂನು ವಿದ್ಯಾರ್ಥಿ ಆಕಾಶ್ ಆರ್.
ಪಾಟೀಲ್ ಅವರು ಆರ್.ಟಿ.ಐ ಮೂಲಕ ಬಸ್‌ಗಳ ಕುರಿತು
ಮಾಹಿತಿ ಪಡೆದಿದ್ದಾರೆ. ವಿಮಾನ ನಿಲ್ದಾಣ ಉದ್ಘಾಟನಾ
ಸಮಾರಂಭಕ್ಕೆ ಜನರನ್ನು ಕರೆತರಲು ಎಷ್ಟು ಬಸ್‌ಗಳನ್ನು
ಬಳಸಲಾಗಿತ್ತು, ಅದಕ್ಕೆ ವೆಚ್ಚವಾಗಿದ್ದೆಷ್ಟು ಮತ್ತು ಹಣ ಪಾವತಿ ಸಿದವರಾರು ಎಂದು ಮಾಹಿತಿ ಕೇಳಿದ್ದರು.
ಆರ್‌ಟಿಐನಲ್ಲಿ ಬಂದ ಉತ್ತರವೇನು?
ಆರ್‌ಟಿಐ ಮೂಲಕ ಆಕಾಶ್ ಪಾಟೀಲ್ ಅವರು ಕೇಳಿದ ಪ್ರಶ್ನೆಗಳಿಗೆ ಕೆಎಸ್ಆರ್‌ಟಿಸಿ ಶಿವಮೊಗ್ಗ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ವಿಮಾನ ನಿಲ್ದಾಣಕ್ಕೆ ಜನರನ್ನು ಕರೆತರಲು 1600 ಕೆಎಸ್ಆರ್‌ಟಿಸಿ ಬಸ್‌ಗಳನ್ನು ಬಳಕೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಇಷ್ಟು ಬಸ್‌ಗಳ ಬಾಡಿಗೆ ಮೊತ್ತ 3,93,92,565 ರೂ. ಎಂದು ತಿಳಿಸಲಾಗಿದೆ. ಕಾರ್ಯಪಾಲಕ ಇಂಜಿನಿಯರ್ ಅವರು ಬಾಡಿಗೆ ಹಣ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದು ಶಿವಮೊಗ್ಗ ಜಿಲ್ಲೆಯಲ್ಲಿ ಬಾಡಿಗೆಗೆ ಪಡೆದ ಕೆಎಸ್ಆರ್‌ಟಿಸಿ ಬಸ್‌ಗಳ ಮಾಹಿತಿ. ಅಕ್ಕಪಕ್ಕದ ಜಿಲ್ಲೆಗಳಿಂದಲು ಜನರನ್ನು ಕರೆತರಲು ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು, ಇತರೆ ವಾಹನಗಳನ್ನು ಬಳಕೆ ಮಾಡಲಾಗಿತ್ತು. ಇವುಗಳ ಲೆಕ್ಕ ಮತ್ತು ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ.
ಆರ್‌ಟಿಐ ಅರ್ಜಿ ಹಾಕಿದ್ದೇಕೆ?
ಇನ್ನು, ಆರ್‌ಟಿಐ ಅರ್ಜಿ ಸಲ್ಲಿಸಲು ಕಾರಣವೇನು ಎಂಬುದರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ವಿದ್ಯಾರ್ಥಿ ಆಕಾಶ್ ಪಾಟೀಲ್, ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಬಳಕೆ ಮಾಡಲಾಗಿತ್ತು. ಆದರೆ ಬಿಲ್ ಪಾವತಿಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೂ ಕೆಎಸ್ಆರ್‌ಟಿಸಿ ಬಸ್ಸುಗಳನ್ನು ಬಳಸಲಾಗಿತ್ತು. ಹಾಗಾಗಿ ಕುತೂಹಲಕ್ಕೆ ಅರ್ಜಿ ಸಲ್ಲಿಸಿದ್ದೆ ಎಂದು ತಿಳಿಸಿದರು.
ಲಕ್ಷಾಂತರ ಜನ ಬಂದಿದ್ದರು ಫೆ.27 ರಂದು ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಗಿತ್ತು. ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಲಕ್ಷಾಂತರ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಸಾವಿರಾರು ಬಸ್ಸು, ಕಾರು ಸೇರಿ ವಿವಿಧ ವಾಹನಗಳು ವಿಮಾನ ನಿಲ್ದಾಣದ ಕಡೆಗೆ ಬಂದಿದ್ದರಿಂದ ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಾಗಾಗಿ ಸಾವಿರಾರು ಜನರು ವಿಮಾನ ನಿಲ್ದಾಣವನ್ನು ತಲುಪಲಾಗದೆ ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯಬೇಕಾಗಿತ್ತು.