ಸಂಕಷ್ಟದಿಂದ ಪಾರು ಮಾಡುವ ಸತ್ಯನಾರಾಯಣ ಪೂಜೆಯ ಮಹತ್ವ ಅರಿಯಿರಿ ; ಮೂಲೆಗದ್ದೆ ಶ್ರೀಗಳು

0 582

ಹೊಸನಗರ : ಸತ್ಯನಾರಾಯಣ ಪೂಜೆ ಮಾಡುವ ವ್ಯಕ್ತಿಗೆ ಸಂಕಷ್ಟಗಳು ದೂರವಾಗುತ್ತವೆ. ಈ ಕಾರಣಕ್ಕಾಗಿಯೇ ಶುಭ ಸಮಾರಂಭಗಳ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸತ್ಯನಾರಾಯಣ ವ್ರತಾಚರಣೆ ನಡೆಸುತ್ತಾರೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಅವರು ಪಟ್ಟಣಕ್ಕೆ ಸಮೀಪದ ಗಂಗನಕೊಪ್ದದ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ವ್ರತದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ನಂಬಿಕೆ ಇಲ್ಲದೇ ಫಲದ ನಿರೀಕ್ಷೆ ಮಾಡಬಾರದು. ಭಗವಂತನಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುವುದರಿಂದ ನಿಶ್ಚಿತವಾಗಿ ಒಳಿತಾಗುತ್ತದೆ. ತಾಂತ್ರಿಕ ಜಗತ್ತಿಗೆ ಕಾಲಿಟ್ಟ ಬಳಿಕ ಧರ್ಮಾಚರಣೆಗಳು ಆಡಂಬರ ಹಾಗೂ ಪ್ರಚಾರಕ್ಕೆ ಸೀಮಿತ ಆಗುತ್ತಿವೆ. ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ಪ್ರಕರಣಗಳು ನಡೆಯುತ್ತಿವೆ. ಇಂದಿನ ಪೀಳಿಗೆಯ ಯುವಕರಲ್ಲಿ ಧಾರ್ಮಿಕ ಮನೋಭಾವ ಹೆಚ್ಚಬೇಕಿದೆ. ಸಾತ್ವಿಕ ನಡೆನುಡಿಗಳನ್ನು ರೂಡಿಸಿಕೊಳ್ಳುವ ವ್ಯಕ್ತಿ ಎಲ್ಲರಿಂದ ಗೌರವ ಪಡೆಯುತ್ತಾನೆ ಎಂದರು.

ಸತ್ಯನಾರಾಯಣ ಪೂಜೆ ವ್ರತಾಚರಣೆಯಿಂದ ದಾರಿದ್ರ್ಯ ನಾಶವಾಗಿ ಸಂಕಷ್ಟಗಳು ದೂರವಾಗುತ್ತವೆ. ಕುಟುಂಬದಲ್ಲಿ ನಡೆಯುವ ಶುಭ ಕಾರ್ಯಗಳ ಸಂದರ್ಭದಲ್ಲಿ ನಡೆಸುವುದು ಹಿಂದಿನಿಂದಲೂ ನಡೆದು ಬಂದಿದೆ. ಶಾಂತಿ, ನೆಮ್ಮದಿ ಹಾಗೂ ದೈವಿಕ ಸಂಪರ್ಕದ ಅನುಭವ ಪೂಜೆಯಲ್ಲಿ ಶ್ರದ್ಧಾಭಕ್ತಿಯೊಂದಿಗೆ ತೊಡಗಿಸಿಕೊಳ್ಳುವ ಭಕ್ತರ ಅನುಭವಕ್ಕೆ ಬಾರದೇ ಇರದು ಎಂದರು.

ಹಿರಿಯ ಸಾಹಿತಿ ಡಾ.ಶಾಂತಾರಾಮ ಪ್ರಭು, ದೇವಾಲಯಗಳ ಪ್ರಾಮುಖ್ಯತೆ, ದೇವರ ಆರಾಧನೆಯ ಕ್ರಮ, ಜೀವನದಲ್ಲಿ ಗುರುವಿನ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಜನಜಾಗೃತಿ ವೇದಿಕೆಯ ಎನ್.ಆರ್.ದೇವಾನಂದ, ಗ್ರಾಪಂ ಅಧ್ಯಕ್ಷ ಓಂಕೇಶ್, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಎನ್.ಗಣೇಶ್, ಯೋಜನಾಧಿಕಾರಿ ಬೇಬಿ, ಮೇಲ್ವಿಚಾರಕ ಸುಭಾಷ್ ಮತ್ತಿತರರು ಪಾಲ್ಗೊಂಡಿದ್ದರು. ಸುತ್ತಮುತ್ತಲ ಗ್ರಾಮದ ವಿವಿಧ ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಭಕ್ತರು ಆಗಮಿಸಿದ್ದರು.

Leave A Reply

Your email address will not be published.

error: Content is protected !!