ಸಕ್ರೆಬೈಲು ಆನೆ ಬಿಡಾರದ ತುಂಬು ಗರ್ಭಿಣಿ ಆನೆ ಬಾಲಕ್ಕೆ ಕಿಡಿಗೇಡಿಗಳಿಂದ ಮಚ್ಚಿನೇಟು !

0 465

ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರದ ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲ ತುಂಡಾಗುವಷ್ಟು ಕತ್ತಿಯಿಂದ ಹಲ್ಲೆ ನಡೆಸಿದ್ದು ವನ್ಯಜೀವಿ ಪ್ರಿಯರಲ್ಲಿ ತಲ್ಲಣ ಮೂಡಿಸಿದೆ.

ತುಂಬು ಗರ್ಭಿಣಿ ಭಾನುಮತಿ ಆನೆಯ ಬಾಲಕ್ಕೆ ಮಚ್ಚಿನಿಂದ ಹೊಡೆದು ಕಿಡಿಗೇಡಿಗಳು ಗಾಯಗೊಳಿಸಿದ್ದಾರೆ.

ಕಾವಾಡಿ ಮೊಹಮ್ಮದ್ ಹಾಗು ಸುದೀಪ್ ಭಾನುಮತಿ ಆನೆಯ ಜವಾಬ್ದಾರಿಯನ್ನು ಹೊತ್ತ ಸಿಬ್ಬಂದಿಗಳಾಗಿದ್ದಾರೆ. ಹದಿನೆಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಭಾನುಮತಿ ಆನೆಯನ್ನು ಮೊನ್ನೆಯಷ್ಟೆ ಮಾವುತ, ಕಾವಾಡಿಗಳು ಆರೈಕೆ ಮಾಡಿ ಆಹಾರ ನೀಡಿ ಬಂದಿದ್ದರು. ಸೋಮವಾರ ಬೆಳಗ್ಗೆ ಭಾನುಮತಿ ಆನೆಯನ್ನು ನೋಡಲು ಹೋದ ಸಿಬ್ಬಂದಿಗಳಿಗೆ ದಾರಿಯಲ್ಲಿ ಅಲ್ಲಲ್ಲಿ ರಕ್ತ ಬಿದ್ದಿರುವುದು ಕಂಡಿದೆ. ಆಗ ಸಿಬ್ಬಂದಿಗಳು ಸಹಜವಾಗಿಯೇ ಖುಷಿ ಪಟ್ಟಿದ್ದಾರೆ. ಭಾನುಮತಿ ಇಲ್ಲೇ ಎಲ್ಲೋ ಮರಿ ಹಾಕಿರಬೇಕು ಎಂದು ರಕ್ತದ ಜಾಡನ್ನು ಹಿಂಬಾಲಿಸಿದ್ದಾರೆ.

ಆದರೆ ಭಾನುಮತಿ ನೋಡಿದಾಗ ಸಿಬ್ಬಂದಿಗಳಿಗೆ ಆಘಾತ ಎದುರಾಗಿತ್ತು. ಭಾನುಮತಿ ಆನೆಯ ಬಾಲಕ್ಕೆ ಯಾರೋ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಚರ್ಮ ಬಾಲಕ್ಕೆ ಅಂಟಿಕೊಂಡಿದ್ದು ಬಿಟ್ಟರೆ ಬಾಲ ಬಹುತೇಕ ತುಂಡಾಗಿದೆ. ಭಾನುಮತಿ ಆನೆಯ ಆರ್ತನಾದ ಮುಗಿಲು ಮುಟ್ಟಿತ್ತು.

ತಕ್ಷಣ ಸಿಬ್ಬಂದಿಗಳು ವನ್ಯಜೀವಿ ವೈದ್ಯ ವಿನಯ್‌ಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ವಿನಯ್ ಆನೆಯ ಬಾಲಕ್ಕೆ ಏಳು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದರು. ನಂತರ ಭಾನುಮತಿ ಚೇತರಿಕೆ ಕಾಣುತ್ತಿದೆ.

ಇದು ಹೊರಗಿನ ಕಿಡಿಗೇಡಿಗಳ ಕೃತ್ಯವೋ ಅಥವಾ ಬಿಡಾರದ ಕೆಲವು ಸಿಬ್ಬಂದಿ ನಡುವಿನ ವೈಯಕ್ತಿಕ ದ್ವೇಷವೋ ಎಂಬುದು ತನಿಖೆಯಿಂದ ಮಾತ್ರ ಹೊರಬೀಳಲಿದೆ.

Leave A Reply

Your email address will not be published.

error: Content is protected !!