‘ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನ’ಕ್ಕೆ ಕೈ ಜೋಡಿಸಿದ ಅಕ್ಕ ಅನು | ಸಮಾಜ ಸೇವೆಯಲ್ಲಿ ಮಾನವೀಯತೆಯ ಕಳಕಳಿ ಇರಲಿ ; ಡಿವೈಎಸ್‌ಪಿ
ರಿಪ್ಪನ್‌ಪೇಟೆ : ಸಮಾಜ ಸೇವೆಯಲ್ಲಿ ತೊಡಗುವ ಪ್ರತಿಯೊಬ್ಬ ವ್ಯಕ್ತಿಯೂ ಮಾನವೀಯ ಗುಣ ಮೈಗೂಡಿಸಿಕೊಳ್ಳಬೇಕು ಎಂದು ತೀರ್ಥಹಳ್ಳಿ ವಿಭಾಗದ ಡಿವೈಎಸ್‌ಪಿ ಗಜಾನನ ವಾಮನಸುತಾರ ಹೇಳಿದರು.
ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಂದವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪೋಸ್ಟ್ ಮ್ಯಾನ್ ಬಳಗದಿಂದ ಸರ್ಕಾರಿ ಶಾಲೆ ಅಭಿಮಾನ ಸುಣ್ಣ-ಬಣ್ಣ ಅಭಿಯಾನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಅತ್ಯಂತ ಪವಿತ್ರ ಕ್ಷೇತ್ರ ಗುರುಕುಲ, ಶಾಲೆ. ಇಲ್ಲಿನ ಪಾಠ ಪ್ರವಚನಗಳು, ಜೀವನದ ದಿಕ್ಕು ಬದಲಿಸುವ ಅತ್ಯಂತ ಅದ್ಭುತ ಶಿಕ್ಷಣ ಶಕ್ತಿ ಹೊಂದಿದೆ ಎಂದರು.

ಸರ್ಕಾರಿ ಕನ್ನಡ ಶಾಲೆಯ ಕುರಿತು ಕೀಳರಿಮೆ ಹೊಂದುವ ಈ ಕಾಲಘಟ್ಟದಲ್ಲಿ ಅಭಿಮಾನದ ಕಿಚ್ಚು ಹತ್ತಿಸಿ, ಸ್ಥಳೀಯರ ನೆರವಿನಿಂದ ಶಾಲೆಗಳಿಗೆ ಸುಣ್ಣ ಬಣ್ಣದ ಜೊತೆಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಕುರಿತು ಆಸಕ್ತಿ ಹೊಂದಿದ ಪೋಸ್ಟ್ ಮ್ಯಾನ್ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಅನುಕರಣೆ ಪ್ರತಿಷ್ಠಾನದ ಮೂಲಕ ರಾಜ್ಯದ ಉದ್ದಗಲಕ್ಕೂ ನೂರಾರು ಸರ್ಕಾರಿ ಶಾಲೆಗೆ ಸೇವಾ ಮನೋಭಾವನೆಯಲ್ಲಿ ಸುಣ್ಣಬಣ್ಣದ ಅಭಿಯಾನಕ್ಕೆ ಪ್ರೇರಕ ಶಕ್ತಿ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಗೋಡೆಗೆ ಬಣ್ಣ ಬಳಿಯುವ ಮೂಲಕ ಚಾಲನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ನಡೆಯುವ ಈ ಅಭಿಯಾನ ನಿಂತ ನೀರಾಗದೆ ಯುವ ಪೀಳಿಗೆಗೆ ಮಾದರಿಯಾಗಬೇಕು. ಸರ್ಕಾರಿ ಕನ್ನಡ ಶಾಲೆಗಳು ಪ್ರಸ್ತುತ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಜನರಲ್ಲಿ ಅರಿವು ಮೂಡಿಸಬೇಕು. ಈ ಶಾಲೆಗಳಿಗೆ ದಾಖಲಾಗುವವರಲ್ಲಿ ಅತಿ ಹೆಚ್ಚಿನವರು ಬಡ ವಿದ್ಯಾರ್ಥಿಗಳಾಗಿರುವದರಿಂದ ಅವರಿಗೆ ಶಿಕ್ಷಣದ ಹಕ್ಕು ಕೊಡಿಸುವುದರ ಜತೆಗೆ ಸರ್ಕಾರಿ ಶಾಲೆ ಉಳಿಸುವ ಕೆಲಸಕ್ಕೆ ಎಲ್ಲಾರೂ ಕೈಜೋಡಿಸಬೇಕು ಎಂದು ಹೇಳಿದರು.
ಪೋಸ್ಟ್ ಮ್ಯಾನ್ ಬಳಗದ ರಫಿ ರಿಪ್ಪನ್‌ಪೇಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸನಗರ ತಾಲೂಕಿನ ಒಟ್ಟು 21 ಸರ್ಕಾರಿ ಶಾಲೆಗಳ ಆಯ್ಕೆ ಮಾಡಿಕೊಂಡಿದೆ. ಕೆಂಚನಾಲ ಗ್ರಾಪಂ ವ್ಯಾಪ್ತಿಯ ಚಂದವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಆಯ್ಕೆ ಎಂದರು.

ಕೆಂಚನಾಲ ಗ್ರಾ.ಪಂ. ಅಧ್ಯಕ್ಷ ಉಬೇದುಲ್ಲಾ ಷರೀಫ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಹೊಸನಗರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ವೈ. ನರೇಂದ್ರ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಆರ್. ಕೃಷ್ಣಮೂರ್ತಿ, ಸಬಾಸ್ಟಿಯನ್ ಮ್ಯಾಥ್ಯೂಸ್ ಹಾಗೂ ಉಮೇಶ್ ಜಾಗದ್ದೆ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.
ಶಿಕ್ಷಕಿ ತಾಜುನ್ ಬಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಕ್ಷಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಮೇಶ್ ಸಿ ಜಾಗದ್ದೆ ಸ್ವಾಗತಿಸಿದರು. ಶಿಕ್ಷಕಿ ಕಾವ್ಯ ವಂದಿಸಿದರು.