ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ವ್ಯಕ್ತಿ ಕೊಲೆ – ಆರೋಪಿಗೆ ಜೀವಾವಧಿ ಶಿಕ್ಷೆ

0 369

ಶಿವಮೊಗ್ಗ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಕೊಲೆ ಪ್ರಕರಣಕ್ಕೆ (Murder Case) ಸಂಬಂಧಿಸಿದಂತೆ ಇಲ್ಲಿನ ರಾಜೀವ್‌ ಗಾಂಧಿ ಬಡಾವಣೆ ನಿವಾಸಿ ಪರಶುರಾಮ (29) @ ಪರ್ಸಾ ಎಂಬುವವನಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ (Fine) ವಿಧಿಸಿದೆ.

ಶಿಕ್ಷೆಗೊಳಗಾದ ಪರಶುರಾಮ 2022ರ ಮಾರ್ಚ್ 2ರಂದು ಮಧ್ಯರಾತ್ರಿ ಶಿವಮೊಗ್ಗ ನಗರದ ಪಿಂಗಾರ ಬಾರ್ ಅಂಡ್ ರೆಸ್ಟೋರೆಂಟ್ ಎದುರು ರಸ್ತೆಯಲ್ಲಿ ಪರಿಚಿತ ಚಂದ್ರಶೇಖರ್ (30) ಎಂಬುವವನ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದನು. ಈ ಬಗ್ಗೆ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ, ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಹರೀಶ್ ಕೆ.ಪಟೇಲ್ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಸರ್ಕಾರಿ ವಕೀಲರಾದ ಪುಷ್ಪಾ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಧೀಶರಾದ ಬಿ.ಆರ್ ಪಲ್ಲವಿ ಮಂಗಳವಾರ ಆರೋಪಿ ಪರಶುರಾಮನಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Leave A Reply

Your email address will not be published.

error: Content is protected !!