ಸೊನಲೆ ಗ್ರಾ.ಪಂ. ಉಪಾಧ್ಯಕ್ಷರ ವಿರುದ್ಧ ಹರಿಹಾಯ್ದ ಗ್ರಾಮಸ್ಥರು | ಗ್ರಾಮಸಭೆಯ ನಡುವೆಯೇ ಕಾಲ್ಕಿತ್ತ ಉಪಾಧ್ಯಕ್ಷ ಕೃಷ್ಣಮೂರ್ತಿ !

0 1,769

ಹೊಸನಗರ: ತಾಲೂಕಿನ ಹುಂಚ (Humcha) ಹೋಬಳಿ ಸೊನಲೆ (Sonale) ಗ್ರಾಮ ಪಂಚಾಯತಿ (Grama Panchayath) ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಸರ್ಕಾರದ ಅಭಿವೃದ್ದಿ ಕಾಮಗಾರಿಗಳ (Work) ಅನುಷ್ಠಾನದ ಮಹಾಪೂರವೇ ನಡೆದಿದ್ದರೂ ವಾರಂಬಳ್ಳಿ ವಾರ್ಡ್ ಪ್ರತಿನಿಧಿಸುವ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೃಷ್ಣಮೂರ್ತಿ ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಆ ಭಾಗದ ಅಭಿವೃದ್ದಿ ಕಾರ್ಯಗಳು ಕುಂಠಿತಗೊಂಡಿದೆ ಎಂದು ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ವಾರಂಬಳ್ಳಿ ಗ್ರಾಮಸ್ಥರು ಗಂಭೀರ ಆರೋಪ ಮಾಡುವ ಮೂಲಕ ಕೆಲಕಾಲ ಸಭೆಯಲ್ಲಿ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು.

ಗ್ರಾ.ಪಂ. ಅಧ್ಯಕ್ಷೆ ಮಂಜುಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ನೂರಾರು ಗ್ರಾಮಸ್ಥರು ವಾರಂಬಳ್ಳಿ ಗ್ರಾಮಕ್ಕೆ ಮೂಲ ಸೌಲಭ್ಯಗಳ ಜೊತೆಯಲ್ಲಿ ಕೂಡಲೇ ಜಲ ಜೀವನ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಉಪಾಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಒಕ್ಕೊರಲಿನಿಂದ ಆಗ್ರಹಿಸಿದರು. ತಾವು ಉಪಾಧ್ಯಕ್ಷರಾಗಿ ಈಗಾಗಲೇ ಎರಡೂವರೆ ವರ್ಷ ಸಂದಿದೆ. ಸೊನಲೆ ಗ್ರಾಮ ಪಂಚಾಯತಿಯ ವಿವಿಧ ವಾರ್ಡ್‌ಗಳಲ್ಲಿ ಲಕ್ಷಾಂತರ ರೂ. ಅನುದಾನದ ಹಲವಾರು ಅಭಿವೃದ್ದಿ ಕೆಲಸಗಳಿಗೆ ಭರ್ಜರಿ ಚಾಲನೆ ದೊರೆತಿದೆ. ಆದರೆ, ವಾರಂಬಳ್ಳಿ ಗ್ರಾಮದ ಜನತೆ ಮಾತ್ರವೇ ಇದರಿಂದ ವಂಚಿತರಾಗಿದ್ದಾರೆ. ಉಪಾಧ್ಯಕ್ಷರು ಈ ಬಗ್ಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದರು.

ಇದಕ್ಕೆ ಉಪಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಸೌಲಭ್ಯ ಕಲಿಸಲು ಅನುದಾನದ ಕೊರತೆ ಇದೆ. ಮುಂಬರುವ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಎಂಬ ಅವರ ಉತ್ತರಕ್ಕೆ ಸಮಾದಾನಗೊಳ್ಳದ ಗ್ರಾಮಸ್ಥರು ಉಪಾಧ್ಯಕ್ಷರ ವಿರುದ್ದ ಹರಿಹಾಯ್ದ ಘಟನೆ ನಡೆಯಿತು. ಕೆಲಕಾಲ ಸಭೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ, ‘ನೀವೇನು ಬೇಕಾದರು ಮಾಡಿಕೊಳ್ಳಿ’ ಎಂಬ ಹಾರಿಕೆ ಉತ್ತರ ನೀಡುತ್ತ ಉಪಾಧ್ಯಕ್ಷ ಕೃಷ್ಣಮೂರ್ತಿ ಸಭೆಯ ಮಧ್ಯೆಯೇ ಸಭಾತ್ಯಾಗ ಮಾಡಿದ್ದು ಮಾತ್ರ ಗ್ರಾಮಸ್ಥರನ್ನು ಇನ್ನಷ್ಟು ಕೆರಳಿಸಿತ್ತು. ಉಪಾಧ್ಯಕ್ಷರ ವರ್ತನೆಯನ್ನು ಖಂಡಿಸಿದ ಗ್ರಾಮಸ್ಥರು ಅವರ ವಿರುದ್ದ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಂತರ, ಸೊನಲೆ ಗ್ರಾಮದ ಸರ್ವೆ ನಂಬರ್ 157ರ ಕಂದಾಯ ಭೂಮಿಯಲ್ಲಿ ಸೊನಲೆ ಪತ್ತಿನ ಸಹಕಾರ ಸಂಘ ಹಾಗೂ ಗ್ರಾ.ಪಂ. ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಲಾ ಒಂದು ಎಕರೆ ಭೂಮಿಯನ್ನು ಮೀಸಲಿಡುವಂತೆ ಸಭೆ ನಿರ್ಣಯಿಸಿತು ಹಾಗೂ ಮುಂದಿನ ದಿನಗಳಲ್ಲಿ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರ ನೂತನ ನಾಡಕಚೇರಿ ಆರಂಭಿಸಲು ಹಕ್ಕೊತ್ತಾಯ ಮಂಡಿಸುವಂತೆ ಕೋರಿ ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಸೊನಲೆ ಸುಬ್ರಹ್ಮಣ್ಯ ಸ್ವಾಮಿರಾವ್, ಸತೀಶ್, ಅಂಬಿಕ, ರಾಘವೇಂದ್ರ, ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಗಣೇಶ್ ಹೆಗಡೆ, ವೈದ್ಯಾಧಿಕಾರಿ ಕೌಶಿಕ್, ಪಿಡಿಓ ಕಾವೇರಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!