ಸ್ಥಿರಾಸ್ತಿ ನಮೂನೆ-3 ಪಡೆಯಲು 45 ದಿನ ಹೋರಾಟ | ಹೊಸನಗರ ಪ.ಪಂ. ಆಡಳಿತ ಅವ್ಯವಸ್ಥೆ ಕುರಿತು ನಾಗರಿಕರ ಆಕ್ರೋಶ

0 699

ಹೊಸನಗರ: ಹೊಸನಗರ (Hosanagara) ಪಟ್ಟಣದಲ್ಲಿನ ಸ್ಥಿರಾಸ್ತಿಯೊಂದರ (Immovable property) ಖಾತೆ ಬದಲಾವಣೆಗೆ ಸಂಬಂಧಿಸಿದ ದಾಖಲೆ ನಮೂನೆ-3 ಪಡೆಯಲು ಇಲ್ಲಿನ ನಾಗರಿಕರೊಬ್ಬರು ಬರೋಬ್ಬರಿ 45 ದಿನ ಕಾದು ನಂತರ ಪಡೆದಿದ್ದಾರೆ. ಅದೂ ಸಹಾ ಲೋಕಾಯುಕ್ತದವರ (Lokayuktha) ಮಧ್ಯ ಪ್ರವೇಶದ ಬಳಿಕ.

ಹೌದು, ವಾರ್ಡ್-11ರ ನಿವಾಸಿ ಕೆ.ವಿ.ರವಿ ಎಂಬುವವರು ತಮ್ಮ ವಾಸದ ಮನೆಯ ದಾಖಲೆ ಪತ್ರಕ್ಕಾಗಿ ಇಲ್ಲಿನ ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಒಂದೆರಡು ದಿನಗಳಲ್ಲಿ ಸಿಗಬೇಕಾದ ದಾಖಲೆ ಪಡೆಯಲು ಹತ್ತಾರು ಬಾರಿ ಕಛೇರಿಗೆ ಅಲೆದರೂ ಇವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ನ.15 ರಂದು ಹೊಸನಗರಕ್ಕೆ ಲೋಕಾಯುಕ್ತ ಅಧಿಕಾರಿಗಳು ಬಂದಾಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ಒಂದು ವಾರದ ಒಳಗೆ ದಾಖಲೆ ನೀಡುವಂತೆ ಮೌಖಿಕ ಆದೇಶವಾದ ಬಳಿಕ ಅಂತೂ ದಾಖಲೆಗಳನ್ನು ಅಧಿಕಾರಿಗಳು ಒದಗಿಸಿದ್ದಾರೆ.

ಒಂದು ಸಾಮಾನ್ಯ ದಾಖಲೆ ಪಡೆಯಲು ಇಷ್ಟೊಂದು ಕಾಲಾವಧಿ ಆಗಿದ್ದು ಯಾಕೆ? ಎಂದು ಪ್ರಶ್ನಿಸಿದರೆ, ಇಲ್ಲಿನ ಪಟ್ಟಣ ಪಂಚಾಯಿತಿಯ ಆಡಳಿತದ ಅವ್ಯವಸ್ಥೆ ಅನಾವರಣವಾಗುತ್ತದೆ.

ಪಾರ್ಟ್ ಟೈಂ ಮುಖ್ಯಾಧಿಕಾರಿ :
ಪಟ್ಟಣ ಪಂಚಾಯಿತಿಗೆ 3 ತಿಂಗಳ ಹಿಂದೆ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಸೊರಬಕ್ಕೆ ವರ್ಗಾವಣೆ ಆಗಿದ್ದರು. ಆ ಬಳಿಕ ಸುಮಾರು ಒಂದೂವರೆ ತಿಂಗಳು ಕಾಲ ಮುಖ್ಯಾಧಿಕಾರಿ ಹುದ್ದೆ ಖಾಲಿ ಉಳಿದಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯೂ ಆಗದೇ ಆಡಳಿತಾಧಿಕಾರಿಯೇ ಮುಖ್ಯಸ್ಥರು. ಆದರೆ ಇತ್ತೀಚಿನವರೆಗೂ ತಹಶೀಲ್ದಾರ್ ಸಹಾ ಪ್ರಭಾರಿಯಾಗಿದ್ದು, ಹೊಸನಗರದ ಪಟ್ಟಣದ ನಿವಾಸಿಗಳಿಗೆ ಸ್ಥಳೀಯ ಸಂಸ್ಥೆಯಿಂದ ಬಹುತೇಕ ಯಾವ ಕಾರ್ಯಗಳೂ ಆಗದಂತಹ ಸ್ಥಿತಿ ನಿರ್ಮಾಣ ಆಗಿತ್ತು.

ಅಧಿಕಾರಿ, ಸಿಬ್ಬಂದಿ ಕೊರತೆ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಜೊತೆಗೆ ಸರ್ಕಾರಿ ಕೆಲಸಗಳು ಜನಸಾಮಾನ್ಯರಿಗೆ ಸಮಯಕ್ಕೆ ಸರಿಯಾಗಿ ದೊರೆಯದಂತಹ ಸ್ಥಿತಿ ನಿರ್ಮಾಣ ಮಾಡುತ್ತವೆ. ಮುಖ್ಯಾಧಿಕಾರಿಯ ಸ್ಥಾನಕ್ಕೆ ಅಂತೂ ಇಂತೂ ಬೇರೊಬ್ಬ ಅಧಿಕಾರಿ ವರ್ಗಾವಣೆ ಆಗಿ ಬಂದರೆ ಎಂದು ಸಮಾಧಾನ ಪಡಬೇಕೆನ್ನುವಷ್ಟರಲ್ಲಿ ತಿಳಿದದ್ದು, ಬಂದವರು ವಾರದಲ್ಲಿ 3 ದಿನ ಮಾತ್ರ ಇಲ್ಲಿ ಸೇವೆ. ಉಳಿದ ಮೂರು ದಿನ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆ ಎನ್ನುವುದು.

ದೂರದ ಜಿಲ್ಲಾ ಕೇಂದ್ರದಿಂದ ಸೋಮವಾರ, ಮಂಗಳವಾರ ಹಾಗೂ ಬುಧವಾರ ಇಲ್ಲಿಗೆ ಆಗಮಿಸುತ್ತಾರೆ. ವಾರದಲ್ಲಿ ಮೂರು ದಿನ ಅಲ್ಲಿಯೂ ಕೆಲಸ ಮಾಡಬೇಕಾಗಿರುವುದರಿಂದ ಅದು ಅವರಿಗೆ ಅನಿವಾರ್ಯವೂ ಹೌದು. ಆದರೆ ಇದರ ಫಲವಾಗಿ ಪಟ್ಟಣ ವ್ಯಾಪ್ತಿಯ ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ವಾರಗಟ್ಟಲೇ ಕಾಯುವ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಕೆಲಸ ನಿರ್ವಹಿಸುವ ಅಧಿಕಾರಿಗೆ ಸಹಾ ಎರಡೆರಡು ಕಡೆ ಜವಾಬ್ದಾರಿ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ.ಇಷ್ಟಲ್ಲದೇ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ನೊಬ್ಬ ಅಧಿಕಾರಿಯನ್ನು ವಾರದಲ್ಲಿ 3 ದಿನ ಸಾಗರ ನಗರಸಭೆಗೆ ಕಾರ್ಯನಿರ್ವಹಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಪೌರಕಾರ್ಮಿಕರಿಗೆ ಸಂಬಳವಿಲ್ಲ:
ನೂತನಅಧಿಕಾರಿ ವರ್ಗಾವಣೆಯಾಗಿ ಬಂದು ತಿಂಗಳು ಕಳೆದರೂ ಇದುವರೆಗೂ ತಾಂತ್ರಿಕವಾಗಿ ಅಧಿಕಾರ ಬದಲಾಗಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುವ ಪೌರಕಾರ್ಮಿಕರೂ ಸೇರಿದಂತೆ ಸುಮಾರು 35 ಮಂದಿಗೆ ಕಳೆದ 3 ತಿಂಗಳುಗಳಿಂದ ವೇತನ ಬಿಡುಗಡೆಯಾಗಿಲ್ಲ. ವೇತನ ಬಿಡುಗಡೆಗೆ ಮುಖ್ಯಾಧಿಕಾರಿಯ ಡಾಂಗಲ್ ಕೀ ಇನ್ನೂ ನೂತನ ಅಧಿಕಾರಿಯ ಹೆಸರಿಗೆ ವರ್ಗಾವಣೆ ಆಗದಿರುವುದು ಇದಕ್ಕೆ ಕಾರಣ.

ಆಡಳಿತಾತ್ಮಕ ಕಾರ್ಯಗಳಿಗೆ ಹಿನ್ನಡೆ:
ಇಲ್ಲಿನ ಹಲವು ಕಾಮಗಾರಿಗಳಿಗೆ ಆಗಬೇಕಿರುವ ಟೆಂಡರ್, ಕಛೇರಿ ಕಡತ ವಿಲೇವಾರಿ ಸೇರಿದಂತೆ ಆಡಳಿತಾತ್ಮಕ ಕಾರ್ಯಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಉಸ್ತುವಾರಿ ಸಚಿವರು ಹಾಗು ಶಾಸಕರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಶಾಸಕರ ಶತಾಯಗತಾಯ ಪ್ರಯತ್ನ:
ಹೊಸನಗರ ಮುಳುಗಡೆ ಸಂತ್ರಸ್ಥ ತಾಲೂಕಾಗಿದ್ದು, ನೂರಾರು ಗಂಭೀರ ಸಮಸ್ಯೆಗಳಿವೆ. ಅದರಲ್ಲಿಯೂ ತಹಸೀಲ್ದಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಆದರೆ ಖಾಲಿ ಇರುವ ಸ್ಥಾನಗಳಿಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿರುವುದು ನುಂಗಲಾರದ ತುತ್ತಾಗಿದೆ. ಈ ನಡುವೆಯೂ ಸನ್ಮಾನ್ಯ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶತಾಯಗತಾಯ ಪ್ರಯತ್ನದ ಬಳಿಕ ತಹಶೀಲ್ದಾರ್ ಸ್ಥಾನಕ್ಕೆ ರಶ್ಮಿ ಎಂಬುವವರು ಅಧಿಕಾರ ವಹಿಸಿಕೊಂಡಿದ್ದಾರೆ. ಅದೇ ರೀತಿ ಪ್ರಭಾರ ಹುದ್ದೆಯಲ್ಲಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯರು ಪ್ರಭಾರ ಹುದ್ದೆಯಲ್ಲಿರುವ ಎಲ್ಲಾ ಸ್ಥಾನಗಳಿಗೂ ಖಾಯಂ ನೇಮಕಾತಿ ಮಾಡಿದರೆ ಒಳಿತು ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ.

ಹೊಸನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕಾರ್ಯ ಕ್ಷೇತ್ರದಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಲ್ಲಿ ಮಾತ್ರ ಅಭಿವೃದ್ಧಿ ನಿರೀಕ್ಷಿಸಬಹುದು. ಈಗ ನಿಯೋಜನೆ ಮಾಡಿರುವ ಕಾರಣದಿಂದ ಇಲ್ಲಿನ ನಿವಾಸಿಗಳಿಗೆ ಹಾಗೂ ಪಟ್ಟಣದ ಒಟ್ಟಾರೆ ಅಭಿವೃದ್ದಿಗೆ ತೊಂದರೆಯಾಗಿದೆ. ಮಂಗಗಳ ಕಾಟ, ಬೀದಿನಾಯಿ ಉಪಟಳದಂತಹ ಹತ್ತಾರು ಸಮಸ್ಯೆಗಳಿಗೆ ತುರ್ತಾಗಿ ಪರಿಹಾರಕಾಣಬೇಕಿದೆ. ಸರ್ಕಾರ ಈ ಬಗ್ಗೆ ತ್ವರಿತವಾಗಿ ಗಮನ ಹರಿಸಲಿ.
– ಗಣಪತಿ ಬಿಳಗೋಡು, ಬಿಜೆಪಿ ತಾಲೂಕು ಅಧ್ಯಕ್ಷ

ಆದೇಶದ ಪ್ರಕಾರ 3 ದಿನ ಹೊಸನಗರ ಹಾಗೂ 3 ದಿನ ಶಿವಮೊಗ್ಗದಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದೇನೆ. ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗಿದ್ದರೂ, ನಿಭಾಯಿಸುತ್ತಿದ್ದೇನೆ. ಸಿಬ್ಬಂದಿ ವೇತನ ಪಾವತಿ ಆಗದಿರಲು ಖಜಾನೆ-2 ಸಂಬಂಧಿಸಿದ ಡಾಂಗಲ್ ಕೀ ಇದುವರೆಗೂ ಬದಲಾಗಿಲ್ಲ. ಈ ಕ್ರಮ ಕೈಗೊಳ್ಳಲಾಗಿದೆ ಇನ್ನೊಂದು ವಾರದೊಳಗಾಗಿ ಸರಿಯಾಗಲಿದ್ದು, ವೇತನ ಪಾವತಿ ಮಾಡಲಾಗುವುದು.
– ಎಸ್.ಜಿ.ಮಾರುತಿ, ಮುಖ್ಯಾಧಿಕಾರಿ, ಹೊಸನಗರ

Leave A Reply

Your email address will not be published.

error: Content is protected !!