ಸ್ಮಶಾನದಲ್ಲಿ ಲಂಚ ಪಡೆಯುತ್ತಿದ್ದಾಗ ಸಮಾಜ ಕಲ್ಯಾಣ ಅಧಿಕಾರಿ ಲೋಕಾಯುಕ್ತ ಬಲೆಗೆ

0 1,030

ಶಿವಮೊಗ್ಗ : ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಸ್ಮಶಾನದಲ್ಲಿ 15 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

ಆರೋಪಿಯನ್ನು ಶಿವಮೊಗ್ಗದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಎಂದು ಗುರುತಿಸಲಾಗಿದೆ.

ಬುಕ್ಲಾಪುರ ಸ್ಮಶಾನ ಕಾಮಗಾರಿ ಹಣ ಬಿಡುಗಡೆ ಮತ್ತು ಸ್ಥಳ ಪರಿಶೀಲನೆ ಮಾಡಿ ರಿಪೋರ್ಟ್ ಕೊಡಲು 15 ಸಾವಿರ ರೂಪಾಯಿಗೆ ಗೋಪಿನಾಥ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತರಿಗೆ ದಾಖಲಾಗಿದ್ದ ದೂರಿನನ್ವಯ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯ್ಕ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಸ್ಮಶಾನದ ಕಾಮಗಾರಿ ಪರಿಶೀಲಿಸಿ ರಿಪೋರ್ಟ್ ಕೊಡುವ ಸಂಬಂಧ 15 ಸಾವಿರ ರೂಪಾಯಿ ಲಂಚ ಪಡೆಯುವಾಗಲೇ ಗೋಪಿನಾಥ್ ನವರನ್ನು ಟ್ರ್ಯಾಪ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ಮತ್ತು ಸಿಬ್ಬಂದಿಗಳಾದ ಮಹಂತೇಶ, ಸಿ.ಹೆಚ್.ಸಿ., ಯೋಗೀಶ್, ಸಿ.ಹೆಚ್.ಸಿ., ಸುರೇಂದ್ರ ಸಿ.ಹೆಚ್.ಸಿ., ಬಿ.ಟಿ, ಚನ್ನೇಶ, ಸಿಪಿಸಿ, ಪ್ರಶಾಂತ್‍ಕುಮಾರ್, ಸಿಪಿಸಿ, ಅರುಣ್‍ಕುಮಾರ್, ಸಿಪಿಸಿ, ದೇವರಾಜ, ಸಿ.ಪಿ.ಸಿ., ರಘುನಾಯ್ಕ, ಸಿ.ಪಿ.ಸಿ., ಪುಟ್ಟಮ್ಮ, ಮಪಿಸಿ, ತರುಣ್‍ಕುಮಾರ್, ಎಪಿಸಿ, ಪ್ರದೀಪ್ ಕುಮಾರ್, ಎಪಿಸಿ, ಜಯಂತ್ ಎಪಿಸಿ ಮತ್ತು ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸಿದ್ದರು.

ಘಟನಾ ವಿವರ ;

ಶಿವಮೊಗ್ಗ ತಾಲ್ಲೂಕು ರಾಮಿನಕೊಪ್ಪ ಗ್ರಾಮದ ಸ್ಮಶಾನ ಮತ್ತು ಬುಕ್ಲಾಪುರ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿ, ರಾಮಿನಕೊಪ್ಪ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿ ಬಾಬು ರೂ. 7.00 ಲಕ್ಷಗಳನ್ನು ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ ಮಂಜೂರು ಮಾಡಿದ್ದು, ಇನ್ನೂ ರೂ.23 ಲಕ್ಷಗಳು ಬರಲು ಬಾಕಿಯಿರುತ್ತದೆ.

ಹಾಗೆಯೇ ಬುಕ್ಲಾಪುರ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ರೂ.10 ಲಕ್ಷಗಳು ಶಿವಮೊಗ್ಗ ನಿರ್ಮಿತಿ ಕೇಂದ್ರದಿಂದ ಮಂಜೂರಾಗಿದ್ದು, ಉಳಿದ ರೂ. 10 ಲಕ್ಷಗಳು ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಛೇರಿಯಿಂದ ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಟ್ಟ ನಂತರ ಮಂಜೂರಾಗುವುದು ಬಾಕಿಯಿರುತ್ತದೆ. ಈ ಬಗ್ಗೆ ವರದಿಯನ್ನು ನೀಡುವಂತೆ ಸಬ್ ಕಾಂಟ್ರಾಕ್ಟರ್ (ಮೇಸ್ತ್ರಿ) ರವಿಕುಮಾರ್ ಜಿ., ಬಿನ್, ಗಂಗಪ್ಪ, ಕಾಟಕೆರೆ ಗ್ರಾಮ, ಶೆಟ್ಟಿಹಳ್ಳಿ ಅಂಚೆ, ಶಿವಮೊಗ್ಗ ಇವರು ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಕೇಳಿಕೊಂಡಾಗ ಅವರು ಹಣವನ್ನು ಕೊಡುವಂತೆ ಕೇಳಿ ವರದಿ ನೀಡಲು ಸತಾಯಿಸಿರುತ್ತಾರೆ. ಅವರಿಗೆ ಲಂಚದ ಹಣ ಕೊಡಲು ಇಷ್ಟವಿರದ ದೂರುದಾರ ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಠಾಣೆಗೆ ಭೇಟಿಯಾಗಿ ಅವರಿಂದ ವಾಯ್ಸ್ ರೆಕಾರ್ಡ್‍ನ್ನು ಪಡೆದುಕೊಂಡು ಹೋಗಿ ಪುನಃ ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗೋಪಿನಾಥ ಇವರನ್ನು ಭೇಟಿಯಾಗಿ ಕೇಳಿಕೊಂಡಾಗ ಅವರು ಬುಕ್ಲಾಪುರ ಗ್ರಾಮದ ಸ್ಮಶಾನ ಅಭಿವೃದ್ಧಿ ಕಾಮಗಾರಿ ಕುರಿತು ಸ್ಥಳ ಪರಿಶೀಲನೆ ಮಾಡಿ ಫೋಟೋ ತೆಗೆದು ವರದಿ ಸಲ್ಲಿಸಲು ಕಾಮಗಾರಿಯ ಮೊತ್ತದ ಶೇ.1% ರಷ್ಟನ್ನು ಮಾಮೂಲು ಎಂದು ಕೊಡುವಂತೆ ದೂರುದಾರನಿಗೆ ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ.

ಆಗ ದೂರುದಾರ ತುಂಬಾ ಕಷ್ಟವಿದೆಯಿಂದು ಹೇಳಿ ವಿನಂತಿಸಿಕೊಂಡಾಗ ಕೊನೆಗೆ ಮುಕ್ಕಾಲು ಪರ್ಸೆಂಟ್‍ಗೆ ಅಂದರೆ ರೂ.15 ಸಾವಿರ ಲಂಚದ ಹಣಕ್ಕಾಗಿ ದೂರುದಾರನಿಗೆ ಬೇಡಿಕೆಯಿಟ್ಟಿರುತ್ತಾರೆ. ತಾನು ನಿರ್ವಹಿಸಿದ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ಕಾಮಗಾರಿ ಮೊತ್ತ ರೂ. 20 ಲಕ್ಷದ ಮುಕ್ಕಾಲು ಪರ್ಸೆಂಟ್ ಅಂದರೆ ರೂ.15 ಸಾವಿರಗಳನ್ನು ಶಿವಮೊಗ್ಗ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಗೋಪಿನಾಥ ಇವರಿಗೆ ಕೊಡಲು ಇಷ್ಟವಿಲ್ಲದ್ದರಿಂದ ಇವರ ವಿರುದ್ಧ ಸಬ್ ಕಾಂಟ್ರಾಕ್ಟರ್ ರವಿಕುಮಾರ್‍ರವರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಅದರಂತೆ ಇಂದು ಎಸ್. ಗೋಪಿನಾಥ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ತಾ & ಜಿ ಇವರು ಶಿವಮೊಗ್ಗ ತಾಲ್ಲೂಕು ಬುಕ್ಲಾಪುರ ಗ್ರಾಮದ ಸ್ಮಶಾನದ ಬಳಿ ದೂರುದಾರನಿಂದ ರೂ. 15 ಸಾವಿರಗಳ ಲಂಚದ ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆಪಾದಿತ ಎಸ್. ಗೋಪಿನಾಥ, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ತಾಲೂಕು ಇವರನ್ನು ತನಿಖಾಧಿಕಾರಿಗಳಾದ ಹೆಚ್.ಎಸ್. ಸುರೇಶ್, ಪಿಐ ಇವರು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

Leave A Reply

Your email address will not be published.

error: Content is protected !!