ಹಬ್ಬದ ರೀತಿಯಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ

0 0

ಶಿವಮೊಗ್ಗ: ಹಬ್ಬದ ರೀತಿಯಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟ ನಡೆಯುತ್ತಿದೆ ಎಂದು ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದ್ದಾರೆ.


ಅವರು ಇಂದು ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.


ಪೌರ ಕಾರ್ಮಿಕರಿಗೆ ವರ್ಷದಲ್ಲಿ ಮೂರು ದಿನಗಳ ಕಾಲ ಹಬ್ಬದ ರೀತಿಯಲ್ಲಿ ವೈವಿಧ್ಯಮಯ ಚಟುವಟಿಕೆ ಹಾಗೂ ಕ್ರೀಡಾಕೂಡ ಹಮ್ಮಿಕೊಂಡು ರಾಜ್ಯದಲ್ಲೇ ಮಾದರಿಯಾಗಿ ಕ್ರೀಡಾಕೂಟಗಳನ್ನು ನಡೆಸುತ್ತಿದ್ದೇವೆ. ಈ ಬಾರಿಯೂ ರಾಜ್ಯ ಮಟ್ಟದ ಕ್ರೀಡಾಕೂಟದಂತೆ ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಿದ್ದಾರೆ. ಸೆ.12ರಂದು ಡಿಎಆರ್ ಮೈದಾನದಲ್ಲಿ ಅಥ್ಲೆಟಿಕ್ ಕ್ರೀಡಾಕೂಡ ಹಾಗೂ ಸೆ.23ರಂದು ಪೌರ ಕಾರ್ಮಿಕರ ದಿನಾಚರಣೆ ಅದ್ಧೂರಿಯಾಗಿ ನಡೆಯಲಿದೆ ಎಂದರು.


ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್ ಮಾತನಾಡಿ, 2007ರಿಂದಲೇ ಪೌರ ಕಾರ್ಮಿಕರಿಗೆ ವಿಶೇಷ ಪ್ರವಾಸವನ್ನು ಪಾಲಿಕೆ ವತಿಯಿಂದ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಪೌರ ಕಾರ್ಮಿಕರು ಕೇವಲ ಸ್ವಚ್ಛತೆಗೆ ಮಾತ್ರ ಸೀಮಿತ ಆಗಬಾರದು. ಅವರಿಗೂ ಬೇರೆ ಬೇರೆ ರೀತಿಯ ಮನರಂಜನೆ, ಭಾರತ್ ಮಾತಾ ಪೂಜನ್ ಅಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಪೌರ ಕಾರ್ಮಿಕರ ದಿನಾಚರಣೆಯನ್ನು ವಿಶೇಷವಾಗಿ  ಆಚರಿಸುತ್ತಿದೆ ಎಂದರು.


ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಇಂದು ಮೇಯರ್ ಕಪ್ ಕ್ರಿಕೆಟ್ ನಡೆಯುತ್ತಿದೆ. 12ರಂದು ಅಥ್ಲೆಟಿಕ್ಸ್ ಕೂಡ ನಡೆಯಲಿದೆ. 23ರಂದು ಅದ್ದೂರಿಯಾಗಿ ಪೌರಕಾರ್ಮಿಕರ ದಿನಾಚರಣೆ ನಡೆಯಲಿದ್ದು, ಅಂದು ಅನೇಕ ಪೌರ ಕಾರ್ಮಿಕರನ್ನು ಸನ್ಮಾನ ಮಾಡುವುದರ ಮೂಲಕ ಅರ್ಥಗರ್ಭಿತವಾಗಿ ಆಚರಿಸುತ್ತಿದ್ದೇವೆ. ಪಾಲಿಕೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆರ್ಥಿಕ ಬೆಂಬಲ ನೀಡಿ ನಮಗೆ ವಿಶ್ವಾಸ ತುಂಬುತ್ತಿದ್ದಾರೆ. ವಿವಿಧ ಹಂತಗಳಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ವಿಶೇಷ ಸೌಲಭ್ಯ ನೀಡಿ ರಾಜ್ಯದಲ್ಲೇ ಮಂಚೂಣಿಯಲ್ಲಿದೆ ಎಂದ ಅವರು, ಪೌರ ಕಾರ್ಮಿಕರ ಭವನದ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದೆ ಎಂದರು‌.


ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು, ವಿಪಕ್ಷ ನಾಯಕಿ ರೇಖಾ ರಂಗನಾಥ್, ಆಯುಕ್ತ ಮಾಯಣ್ಣ ಗೌಡ, ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ರೈಲ್ವೆ ನಿಲ್ದಾಣಕ್ಕೆ ಲೋಹಿಯಾ ಹೆಸರಿಡಲು ಆಗ್ರಹ

ಶಿವಮೊಗ್ಗ: ಸಾಗರದ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಡಾ. ರಾಮಮನೋಹರ ಲೋಹಿಯಾ ಅವರ ಹೆಸರನ್ನು ಇಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.


ರಾಮಮನೋಹರ ಲೋಹಿಯಾ ಅವರು 1951ರ ಜೂನ್ 13ರಂದು ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಐತಿಹಾಸಿಕ ಉಳುವವನೇ ಹೊಲದೊಡೆಯ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದರು. 2024ರ ಜೂ.13ಕ್ಕೆ 75 ವರ್ಷ ತುಂಬುತ್ತವೆ. ಈ ಅಮೃತ ವರ್ಷದ ಸಂದರ್ಭದಲ್ಲಿ ಈ ನಿಲ್ದಾಣಕ್ಕೆ ಡಾ. ರಾಮಮನೋಹರ ಲೋಹಿಯಾ ಅವರ ಹೆಸರನ್ನು ಇಡಬೇಕು ಎಂದು ಮನವಿದಾರರು ಆಗ್ರಹಿಸಿದರು.


ಅಂದು ರಾಮಮನೋಹರ ಲೋಹಿಯಾ ಅವರ ಜೊತೆಗೆ ಹಲವು ಚಳುವಳಿಗಾರರು ಬಂಧನಕ್ಕೆ ಒಳಗಾಗಿದ್ದರು.  ಈ ಚಳುವಳಿಗೆ ಒಂದು ಹೊಸ ರೂಪ ಬಂದಿತ್ತು. ಕಾಗೋಡು ಸತ್ಯಾಗ್ರಹ ಕೂಡ ಯಶಸ್ವಿಯಾಗಿತ್ತು. ಲೋಹಿಯಾ ಅವರ ಬಂಧನದ ನೆನಪಿನಲ್ಲಿ ಸಾಗರ ರೈಲ್ವೆ ನಿಲ್ದಾಣದ ಎದುರಿಗೆ ಸುವರ್ಣಮಹೋತ್ಸವ ಕಾರ್ಯಕ್ರಮ ನಡೆಸಿ ನಾಮಫಲಕವನ್ನು ಅನೇಕ ಗಣ್ಯರ ಸಮ್ಮುಖದಲ್ಲಿ ಅಳವಡಿಸಲಾಗಿತ್ತು ಎಂದು ಮನವಿದಾರರು ನೆನಪಿಸಿದರು.


ಅಂದಿನ ಕೇಂದ್ರ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ಅವರ ಮೂಲಕ ಈ  ಹೆಸರನ್ನು ಅಧಿಕೃತಗೊಳಿಸಲು ಅಂದಿನ ಕೇಂದ್ರ ಸರ್ಕಾರದ ಗೃಹ ಸಚಿವರಾಗಿದ್ದ ಎಲ್.ಕೆ. ಅಡ್ವಾಣಿಯವರಿಗೆ ಮನವಿ ಮಾಡಲಾಗಿತ್ತು. ಆದರೆ ಇದುವರೆಗೂ ಈ ಕೆಲಸ ಆಗಿಲ್ಲ. ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಿ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರನ್ನು ನಾಮಕರಣ ಮಾಡಲು ಮನವಿಯಲ್ಲಿ ಆಗ್ರಹಿಸಿದ್ದಾರೆ.


ಈ ಸಂದರ್ಭದಲ್ಲಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಎಸ್.ವಿ. ರಾಜಮ್ಮ, ಕೆ.ಆರ್. ಶಿವಣ್ಣ, ಶಂಕ್ರಾ ನಾಯ್ಕ, ನರಸಿಂಹ ಮೂರ್ತಿ, ಬಿ.ಟಿ. ಸೋಮಶೇಖರಯ್ಯ, ಪುಷ್ಪಲತಾ ಮುಂತಾದವರಿದ್ದರು.

Leave A Reply

Your email address will not be published.

error: Content is protected !!