ಹೆಚ್.ಸಿ ಯೋಗೇಶ್ ರವರಿಗೆ ಜಿಲ್ಲಾಧ್ಯಕ್ಷರಿಂದ ಶೋಕಾಸ್ ನೋಟೀಸ್ ; ಯಾಕೆ ?
ಶಿವಮೊಗ್ಗ: ಶಿಸ್ತು ಉಲ್ಲಂಘನೆ ಆಧಾರದ ಮೇಲೆ ಪಾಲಿಕೆ ಸದಸ್ಯ ಹಾಗೂ ವಿಧಾನ ಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಯೋಗೇಶ್ ಅವರಿಗೆ ಜಿಲ್ಲಾಧ್ಯಕ್ಷರು ಶೋಕಾಸ್ ನೋಟೀಸ್ ನೀಡಿದ್ದಾರೆ.
ಯೋಗೇಶ್ ಅವರು ಶಿವಮೊಗ್ಗ ನಗರ ಕ್ಷೇತ್ರಕ್ಕೆ ಚುನಾವಣೆಯಲ್ಲಿ ಸೋತಿದ್ದರು, ಆ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಈಗ ಕಾಂಗ್ರೆಸ್ ಸೇರಿಕೊಂಡಿರುವ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದರು. ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರುವುದನ್ನು ಯೋಗೇಶ್ ಬಲವಾಗಿ ವಿರೋಧಿಸಿದ್ದರು. ಅಲ್ಲದೆ ಆಯನೂರು ಮಂಜುನಾಥ್ ಕಾಂಗ್ರೆಸ್ ಕಚೇರಿಗೆ ಬಂದಿದ್ದಾಗ ಆಯನೂರು ಮಂಜುನಾಥ್ ಅವರನ್ನು ತಳ್ಳಿದ್ದರು ಕೂಡ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಕೂಡ ಆಯನೂರು ಮಂಜುನಾಥ್ ಅವರಿಗೆ ಸೀಟ್ ನೀಡದೆ ಅವಮಾನ ಮಾಡಿದ್ದರು ಎಂದು ಹೇಳಲಾಗಿದೆ. ಮತ್ತು ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಸೇರಿದಂತೆ ಹಲವು ಕಾಂಗ್ರೆಸ್ ಪದಾಧಿಕಾರಿಗಳು ಈ ಬಗ್ಗೆ ಕೆಪಿಸಿಸಿಗೂ ದೂರು ನೀಡಿದ್ದಾರೆ.
ಒಟ್ಟಾರೆ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶೋಕಾಸ್ ನೋಟೀಸ್ ನೀಡಿ ಮೂರು ದಿನಗಳ ಗಡುವು ನೀಡಿದ್ದಾರೆ ಎಂದು ಹೇಳಲಾಗಿದೆ.

ಹಣ್ಣು ವಿತರಣೆ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ವಿನೋದ್ ಹುಟ್ಟು ಹಬ್ಬದ ಪ್ರಯುಕ್ತ ಎಸ್.ಕೆ. ಮರಿಯಪ್ಪ ಹಾಗೂ ಪ್ರಭಾಕರ್ ಗೌಡ, ಸುನಿಲ್, ರಘುವೀರ್ ಸಿಂಗ್ ನೇತೃತ್ವದಲ್ಲಿ ಇಂದು ಅನಾಥರಿಗೆ ಲಘು ಉಪಾಹಾರ ಮತ್ತು ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಮನ್‌ರಾಜ್, ಪುನೀಲ್, ಅಶೋಕ, ಅಪ್ಪು, ಶಿವಕುಮಾರ್, ಈಶ್ವರ್ ಇದ್ದರು.
ಶಿಕ್ಷಕರ ದಿನಾಚರಣೆ :
ಮಕ್ಕಳ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ವಿನೂತನ ರೀತಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ಶಿವಮೊಗ್ಗ ಜ್ಯೂಯಲ್ ರಾಕ್ ಹೋಟೆಲ್ ಮಿಲನ ಹಾಲ್ ನಲ್ಲಿ ಶಿಕ್ಷಕರೆಲ್ಲ ಸೇರಿ ಶಿಕ್ಷಕ ದಿನಾಚರಣೆ ಆಚರಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದು ಶಿಕ್ಷಕಿಯರು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿಯರಾದ ವಿಶಾಲಾಕ್ಷಿ, ಜಯಮ್ಮ, ಕಮಲಾವತಿ, ಆರ್. ಶಾಂತಕುಮಾರಿ, ಸಿ.ಆರ್. ಗಾಯತ್ರಿ, ಡಿ.ಎಂ. ಶಾಂತಪ್ಪ, ಶಿಕ್ಷಕಿಯರಾದ ಪ್ರಭಾವತಿ, ಪುಷ್ಪಾ, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಗಣೇಶ್ ಅಂಗಡಿ, ಎ.ಜೆ. ವಿಶ್ವನಾಥ್, ಇ.ಜಿ. ವೆಂಕಟೇಶ್, ಡಾ. ಜಗದೀಶ್, ಸುರೇಶ್, ಯೋಗೇಶ್, ರಂಗನಾಥ್, ಜಯಂತಿ, ಕವಿತಾ, ಆಶಾ, ಗೀತಾ, ಸುಮಂಗಳಾ, ವೀಣಾ, ಭಾಗ್ಯಾ ರಮೇಶ್ ಮತ್ತಿತರರು ಇದ್ದರು.