ಹೊಸನಗರದಲ್ಲಿ ವಿಶೇಷ ಚೇತನ ಮಕ್ಕಳ ದಿನಾಚರಣೆ | ವಿಶೇಷ ಚೇತನ ಮಕ್ಕಳು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿಯದಿರಲಿ ; ಬಿಇಒ

0 512

ಹೊಸನಗರ : ವಿಶೇಷ ಚೇತನ ಮಕ್ಕಳು ಶಾಪಗ್ರಸ್ಥರಲ್ಲ. ಅವರು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿಯಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಮಗು ದೈಹಿಕ ಅಥವಾ ಮಾನಸಿಕ ನ್ಯೂನತೆಯೊಂದಿಗೆ ಜನಿಸಿದಾಗ ಪೋಷಕರು ದೃತಿಗೆಡಬಾರದು. ಬದಲಾಗಿ ಅಂತಹ ಮಗುವಿನ ಆರೈಕೆ, ಆತ್ಮಸ್ಥೈರ್ಯ ತುಂಬಲು ಪ್ರಯತ್ನ ಪಡಬೇಕು. ಯಾವ ಕೊರೆತೆಯ ಅನುಭವವೂ ಮಗುವಿಗೆ ಆಗದಂತೆ ಬೆಳೆಸುವುದು ಪೋಷಕರ ಕರ್ತವ್ಯ ಎಂದು
ಸರ್ಕಾರ ವಿಕಲಚೇತನ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸದುಪಯೋಗಪಡಿಸಿಕೊಳ್ಳಲು ಪೋಷಕರು ಮುಂದಾಬೇಕು. ವಿಶೇಷಚೇತನರಾಗಿ ಹುಟ್ಟಿಯೂ ಹಲವು ಸಾಧನೆಗೈದ ಪ್ರತಿಭೆಗಳು ಇಂತಹ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಅಂತಹ ವಾತಾವರಣವನ್ನು ಕಲ್ಪಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರ ಮೇಲಿದ ಎಂದರು.

ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ ಮಾತನಾಡಿ, ಸಹಜವಾಗಿ ಕಲಿಯಲು ತೊಂದರೆ ಅನುಭವಿಸುವ ವಿಶೇಷಚೇತನ ಮಕ್ಕಳಿಗೆ ವಿಶೇಷ ಮಾದರಿಯಲ್ಲಿ ಶಿಕ್ಷಣ ನೀಡಬೇಕಾಗುತ್ತದೆ. ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಸಾಕಷ್ಟು ನ್ಯೂನತೆಗಳನ್ನು ಸರಿಪಡಿಸಲು ಅವಕಾಶವಿರುತ್ತದೆ. ವಿಶೇಷಚೇತನ ಮಗುವಿಗೆ ಅನುಕಂಪ ತೋರುವ ಬದಲು ಅವರ ನೆರವಿಗೆ ಹೇಗೆ ಧಾವಿಸಬಹುದು ಎನ್ನುವುದನ್ನು ಪೋಷಕರು ಅರಿಯಬೇಕು. ನ್ಯೂನತೆಯು ಮಕ್ಕಳ ದೌರ್ಬಲ್ಯ ಆಗದಂತೆ ಎಚ್ಚರವಹಿಸಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ಅವರು ಎಲ್ಲರಂತೆ ಬಾಳುವ ವಾತಾವರಣ ನಿರ್ಮಾಣ ಆಗಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ನಾಗಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಪ್ರಮುಖರಾದ ಮಾನಸ, ಮಂಜುಳ, ದೀಪಾ, ಲಿಲ್ಲಿ ಡಿಸೋಜಾ, ನಾಗೇಶ್, ಕುಬೇರಪ್ಪ, ಚಂದ್ರಕಾಂತ್, ಎಚ್.ಆರ್.ಉಮೇಶ್ ಮತ್ತಿತರರು ಇದ್ದರು.
ವಿಶೇಷ ಚೇತನ ಮಕ್ಕಳಿಗಾಗಿ ಏರ್ಪಡಿಸಿದ್ದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.

Leave A Reply

Your email address will not be published.

error: Content is protected !!