ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಆಗಬೇಕಿದೆ ಎಮರ್ಜೆನ್ಸಿ ಆಪರೇಷನ್ !
ಹೊಸನಗರ : ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕು ಮಳೆನಾಡಿನ ತವರುರಾದ ಹೊಸನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಇದ್ದರೂ ಇಲ್ಲಿಗೆ ಮಂಜೂರಾದ ವೈದ್ಯ ಸಿಬ್ಬಂದಿಗಳಲ್ಲಿ ಅರ್ಧಕ್ಕಿಂತ ಕಡಿಮೆ ಜನ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರು ಸರ್ಕಾರಿ ಸೇವೆಯಿಂದ ವಂಚಿತರಾಗುತ್ತಿದ್ದಾರೆ.

ಶಸ್ತ್ರಚಿಕಿತ್ಸಕರು, ನೇತ್ರ ತಜ್ಞರು, ಕೀಲು ಮೂಳೆ ತಜ್ಞರು, ಧರ್ಮ ವೈದ್ಯರು, ಮಕ್ಕಳ ತಜ್ಞರು, ದಂತ ವೈದ್ಯರು, ತುರ್ತು ಅಪಘಾತ ಚಿಕಿತ್ಸೆ ವೈದ್ಯರುಗಳು ಮಾತ್ರ ಕರ್ತವ್ಯದಲ್ಲಿದ್ದು ಕಿವಿ, ಮೂಗು, ಗಂಟಲು ತಜ್ಞರು, ಅರವಳಿಕೆ ತಜ್ಞರು, ಫಿಜಿಷಿಯನ್, ಸ್ತ್ರೀರೋಗ ತಜ್ಞರು ಹಾಗೂ ತುರ್ತು ಅಪಘಾತ ಚಿಕಿತ್ಸೆ ವಿಭಾಗದ ಇಬ್ಬರು ವೈದ್ಯರುಗಳ ಹುದ್ದೆ ಖಾಲಿಯಾಗಿದ್ದು ಸಾರ್ವಜನಿಕರು ಸರ್ಕಾರಿ ವೈದ್ಯಕೀಯ ಸೇವೆಯಿಂದ ವಂಚಿತರಾಗಿದ್ದಾರೆ.
ಇಬ್ಬರು ಶುಶ್ರೂಷಣ ಅಧಿಕಾರಿಗಳು ಸೇರಿದಂತೆ ದ್ವಿತೀಯ ದರ್ಜೆ ಸಹಾಯಕರು ಕ್ಲರ್ಕ್ ಕಂ ಟೈಪಿಸ್ಟ್ ಗ್ರೇಡ್ 2 ನರ್ಸಿಂಗ್ ಅಧೀಕ್ಷಕರು ನೇತ್ರಾಧಿಕಾರಿಗಳು ಹಿರಿಯ ಹಾಗೂ ಕಿರಿಯ ಫಾರ್ಮಸಿಸ್ಟ್ ಕಿರಿಯ ಪ್ರಯೋಗ ಶಾಲಾ ಟೆಕ್ನಾಲಜಿಸ್ಟ್ ಸೇರಿದಂತೆ ಇತರೆ 33 ಗ್ರೂಪ್ ಡಿ ನೌಕರರ ಹುದ್ದೆ ಖಾಲಿ ಇರುತ್ತದೆ.
ಲಕ್ಷಾಂತರ ರೂ. ಬೆಲೆ ಬಾಳುವ ಅತ್ಯಾಧುನಿಕ ಯಂತ್ರಗಳು ಉಪಯೋಗಿಸುವ ತಂತ್ರಜ್ಞರಿಲ್ಲದೆ ತುಕ್ಕು ಹಿಡಿಯುವ ಸ್ಥಿತಿಯಲ್ಲಿದೆ. ಇಡೀ ಆಸ್ಪತ್ರೆ ಸಂಕೀರ್ಣಕ್ಕೆ ಲಭ್ಯವಾಗುವ ಸೋಲಾರ್ ವ್ಯವಸ್ಥೆ ಇದ್ದರು ಸಹ ಅದರ ನಿರ್ವಹಣೆ ಇಲ್ಲದೆ ಪ್ರತಿ ತಿಂಗಳ 50 ಸಾವಿರಕ್ಕೂ ಹೆಚ್ಚು ರೂ. ಗಳ ಬಿಲ್ಲನ್ನು ಮೆಸ್ಕಾಂಗೆ ಕಟ್ಟುವ ದುಸ್ಥಿತಿ ಆಸ್ಪತ್ರೆಗೆ ಬಂದಿದೆ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಸಹ ಕೆಲ ಸಮಯಗಳಿಂದ ಮುಚ್ಚಿದ್ದರಿಂದ ಕೃಷಿ ಕೂಲಿ ಕಾರ್ಮಿಕರೆ ಹೆಚ್ಚಿರುವ ಈ ಭಾಗದ ಜನರು ಹೆಚ್ಚಿನ ಹಣ ನೀಡಿ ಔಷಧಿಗಳನ್ನ ಖರೀದಿಸುವ ದುರ್ವಿಧಿ ಉಂಟಾಗಿದೆ.

ಪ್ರತಿ ದಿನ 400 ರಿಂದ 500 ಹೊರರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು ವೈದ್ಯರುಗಳ ಹಾಗೂ ಪ್ರಧಾನಮಂತ್ರಿಯ ಜನೌಷಧಿಗಳ ಕೊರತೆಯಿಂದ ಬಡ ಕೃಷಿ ಕೂಲಿ ಕಾರ್ಮಿಕರು ಸಾಗರ, ತೀರ್ಥಹಳ್ಳಿ, ಶಿವಮೊಗ್ಗ, ಮಣಿಪಾಲಗಳಿಗೆ ಆರೋಗ್ಯ ಸೇವೆಗಾಗಿ ಹೋಗಬೇಕಾಗಿದೆ.
ಕಳೆದ ತಿಂಗಳಲ್ಲಿ 20 ಸಾವಿರಕ್ಕೂ ಹೆಚ್ಚು ರೋಗಿಗಳು ಓಪಿಡಿಯಲ್ಲಿ ದಾಖಲಾಗಿದ್ದು ಆಸ್ಪತ್ರೆಗೆ ತುರ್ತಾಗಿ ಡಯಾಲಿಸಿಸ್ ಸೆಂಟರ್ ಹಾಗೂ ಸ್ಕ್ಯಾನಿಂಗ್ ಪರಿಕರದ ಅಗತ್ಯತೆ ಇದೆ.