ಆತ್ಮದಿಂದ ವ್ಯಕ್ತಿಯನ್ನು ಗುರುತಿಸಬೇಕು ಲಿಂಗದಿಂದಲ್ಲ ; ನ್ಯಾ. ಮಲ್ಲಿಕಾರ್ಜುನಗೌಡ

0 33


ಶಿವಮೊಗ್ಗ: ಹೆಣ್ಣು ಮತ್ತು ಗಂಡು ಸಮಾನರಾಗಿದ್ದು, ವ್ಯಕ್ತಿತ್ವದಿಂದ ಅಥವಾ ಆತ್ಮದಿಂದ ವ್ಯಕ್ತಿಯನ್ನು ಗುರುತಿಸಬೇಕು. ಲಿಂಗದಿಂದಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅಭಿಪ್ರಾಯಪಟ್ಟರು.


ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನೂ ಸೇವೆಗಳ ಪಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಿಎಆರ್ ಸಭಾಂಗಣದಲ್ಲಿ ಇಂದು ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಹೆಣ್ಣು ಅನಾದಿ ಕಾಲದಿಂದ ತನ್ನ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿದ್ದಾಳೆ. 12 ನೇ ಶತಮಾನದ ಅನುಭವ ಮಂಟಪದಲ್ಲಿ ಹೆಣ್ಣಿಗೆ ಸಮಾನತೆ ಇತ್ತು. ಇಂತಹ ಸಮಾನತೆಗಾಗಿ ಮಹಿಳೆಯರು ಇಂದಿಗೂ ಹೋರಾಡುತ್ತಿದ್ದಾರೆ. ಮನುಕುಲ ತನ್ನಂತೆ ಪರರು ಎಂದು ಬಗೆಯಬೇಕು. ಆಗ ಮಾತ್ರ ಇತರರ ಸಮಸ್ಯೆ ಅರಿಯಲು ಸಾಧ್ಯ ಎಂದರು.


ಸರ್ಕಾರ ಮಹಿಳೆಯರ ಸಂರಕ್ಷಣೆಗಾಗಿ, ಏಳ್ಗೆಗಾಗಿ ಅನೇಕ ಕಾಯ್ದೆ, ಕಾನೂನುಗಳನ್ನು ಜಾರಿಗೊಳಿಸಿದೆ. ಪ್ರಸ್ತುತ ಮಹಿಳೆ ರಕ್ಷಣಾ ವಲಯದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಎಲ್ಲ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ದುಡಿಯುತ್ತಿದ್ದಾರೆ. ಹೆಣ್ಣುಮಕ್ಕಳು ತಮ್ಮ ಹಕ್ಕುಗಳ ರಕ್ಷಣೆಯೊಂದಿಗೆ ಕರ್ತವ್ಯವನ್ನು ಕೂಡ ಸಮರ್ಪಕವಾಗಿ ಮಾಡಿ ಒಳ್ಳೆಯ ಹೆಸರನ್ನು ತರುವ ವ್ಯಕ್ತಿಗಳಾಗಬೇಕೆಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಎಲ್ಲಿಯವರೆಗೆ ಸಮುದಾಯದಲ್ಲಿ ಹೆಣ್ಣು ಪ್ರಬಲಳು ಎಂಬ ಮನೋಭಾವ ಬರುವುದಿಲ್ಲವೋ ಅಲ್ಲಿಯವರೆಗೆ ಈ ಅಸಮಾನತೆ ಹೋಗುವುದಿಲ್ಲ. ಆದ್ದರಿಂದ ಹೆಣ್ಣು ಕೀಳು, ಗಂಡು ಮೇಲು ಎಂಬುದನ್ನು ಬಿಟ್ಟು, ಹೆಣ್ಣು ಸದೃಢಳು ಎಂಬುದನ್ನು ಹೆಣ್ಣುಮಕ್ಕಳೇ ಪ್ರತಿಪಾದಿಸಬೇಕೆಂದರು.
ಜೈವಿಕವಾಗಿ ಯಾವುದೇ ಹೆಣ್ಣು ಪ್ರಬೇಧಗಳು ಪ್ರಬಲವಾಗಿರುತ್ತವೆ. ಅದೇ ರೀತಿ ನಾಗರೀಕತೆಗೆ ಮೊದಲು ಮಹಿಳಾ ವರ್ಗ ಪ್ರಬಲವಾಗಿತ್ತು. ನಾಗರೀಕತೆ ಬೆಳೆಯುತ್ತಾ ಬಂದಂತೆ ಸಮಾಜದಲ್ಲಿ ಗಂಡು-ಹೆಣ್ಣು ತಾರತಮ್ಯ, ಹೆಣ್ಣಿನ ವಿರುದ್ದ ಶೋಷಣೆ ಶುರುವಾಯಿತು. ಆನಂತರದಲ್ಲಿ ಈ ತಾರತಮ್ಯ, ಅಸಮಾನತೆ ಹೋಗಲಾಡಿಸಲು ಅನೇಕ ಕಾಯ್ದೆ, ಕಾನೂನುಗಳು ಬಂದವು.


ಸಮ ಸಮಾಜ ನಿರ್ಮಾಣವಾಗಬೇಕಾದರೆ ಗಂಡು ಪ್ರಬಲ, ಹೆಣ್ಣು ಕೀಳೆಂಬ ತಪ್ಪು ಕಲ್ಪನೆ ದೂರವಾಗಬೇಕು. ಅದಕ್ಕೆ ಮೊದಲು ಹೆಣ್ಣುಮಕ್ಕಳು ತಾವು ಸಬಲರೆಂದು ಒಪ್ಪಿಕೊಂಡು ಮುಂದೆ ಬರಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಹೆಣ್ಣುಮಕ್ಕಳು ದುರ್ಬಲರಲ್ಲ. ಅವರು ಏಕಕಾಲದಲ್ಲಿ ಬಹುಕಾರ್ಯಗಳನ್ನು ಮಾಡಬಲ್ಲ ನಿಪುಣರು. ಕುಟುಂಬ ನಿರ್ವಹಣೆ, ಅಡುಗೆ, ಮಕ್ಕಳು-ಮನೆಯ ಪಾಲನೆ, ಪೋಷಣೆಯೊಂದಿಗೆ ಹೊರಗಡೆ ಸಹ ವೃತ್ತಿಯನ್ನು ನಿರ್ವಹಿಸುವಲ್ಲಿ ಸಮರ್ಥರು. ಆದರೆ ವಿಪರ್ಯಾಸವೆಂದರೆ ಇಷ್ಟೊಂದು ಸಮರ್ಥಳಾದ ಹೆಣ್ಣನ್ನು ಶೋಷಣೆಗೆ ಒಳಪಡಿಸುತ್ತಾ ಬರಲಾಗಿದೆ.


ಸಮಾಜದಲ್ಲಿ ಗಂಡು-ಹೆಣ್ಣೆಂಬ ತಾರತಮ್ಯ ಮತ್ತು ಅಸಮಾನತೆ ಹೋಗಬೇಕೆಂದರೆ ಮೊದಲು ಕುಟುಂಬದಲ್ಲಿ ಮಕ್ಕಳನ್ನು ಸಮಾನತೆಯಿಂದ ಬೆಳೆಸಬೇಕು. ಗಂಡು ಮತ್ತು ಹೆಣ್ಣು ಸಮಾನರು ಎಂಬಂತಹ ಸಂಸ್ಕøತಿ ನೀಡಿ ಬೆಳೆಸಿದಾಗ ಮಾತ್ರ ಸಮಾನತೆ ಸಾಧ್ಯವಾಗುತ್ತದೆ. ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಎಲ್ಲೋ ಒಂದು ಕಡೆ ಕುಟುಂಬ ಮತ್ತು ಸಮಾಜವೂ ಕಾರಣವಾಗುತ್ತದೆ. ಆದ್ದರಿಂದ ಮನೆಯಿಂದಲೇ ಸಮಾನತೆಯ ಅಭ್ಯಾಸವಾದಲ್ಲಿ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದರು.


ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಸ್ವಾಗತಿಸಿದರು. ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಸಿಡಿಪಿಓ ಚಂದ್ರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಕೀಲೆ ಕವಿತಾ ಹೆಚ್ ಎಲ್ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ.ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಹಿಳಾ ಕಾನೂನುಗಳ ಕುರಿತು ಮಾತನಾಡಿದರು.

Leave A Reply

Your email address will not be published.

error: Content is protected !!