ಆಯನೂರು ಗೆಲುವು ನಿಶ್ಚಿತ ; ಕೆ.ಬಿ ಪ್ರಸನ್ನ ಕುಮಾರ್

0 47

ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದು, ಅವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.


ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಷರತ್ತು ಇಲ್ಲದೇ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ನಗರದ ಹಿತಾಸಕ್ತಿ ಕಾಪಾಡುವುದು ನನ್ನ ಧರ್ಮವಾಗಿದೆ. ನನ್ನ ಎಲ್ಲಾ ಅಭಿಮಾನಿಗಳು ಕೂಡ ಶಾಂತಿ ಬಯಸುವವರು. ಯಾರೂ ಬೆಂಕಿ ಹಚ್ಚುವವರಲ್ಲ, ಎಲ್ಲರೊಂದಿಗೆ ಚರ್ಚೆ ಮಾಡಿಯೇ ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ಬಹಳ ಜನ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬರಲಿದ್ದಾರೆ ಎಂದರು.

ಎಷ್ಟು ಮತದ ಅಂತರದಿಂದ ಗೆಲ್ಲಬಹುದು ಎಂಬ ಪ್ರಶ್ನೆಗೆ ಆಯನೂರು ಮಂಜುನಾಥ್ ಗೆಲ್ಲವುದು ನಿಶ್ಚಿತ. ಒಂದು ಮತವಾದರೂ ಗೆಲುವು ಗೆಲುವೇ. ಫಲಿತಾಂಶ ಬಂದ ಮೇಲೆ ಮತದ ಅಂತರ ಗೊತ್ತಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮನಸ್ಥಿತಿಯನ್ನು ಮತದಾರ ಅರಿತಿದ್ದಾನೆ. ನಗರದ ಅಭಿವೃದ್ಧಿಗೆ ಶಾಂತಿ ಕಾಪಾಡುವುದು ಅತಿ ಮುಖ್ಯ. ರೈಲು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಆದರೂ ಸಹ ಯಾವುದೇ ಕೈಗಾರಿಕೋದ್ಯಮಿ ಶಿವಮೊಗ್ಗ ಜಿಲ್ಲೆಗೆ ಬರುವುದಿಲ್ಲ ಏಕೆ ಎಂದು ಬಿಜೆಪಿಯವರೇ ಹೇಳಬೇಕು. ಶಿವಮೊಗ್ಗದ ಜನ ಶಾಂತಿಪ್ರಿಯರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗೆ ಈ ಬಾರಿ ಮತ ಹಾಕಲಿದ್ದಾರೆ.


ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಗೆಲ್ಲುವ ದಾರಿ ಹಗುರವಾಗಿದೆ. ನನ್ನ ಗೆಲುವಿನ ಹಾದಿಗೆ ಕೆ.ಬಿ. ಪ್ರಸನ್ನಕುಮಾರ್, ಎಂ. ಶ್ರೀಕಾಂತ್ ಅವರ ತಂಡ ಸುಲಭದ ದಾರಿ ಮಾಡಿಕೊಟ್ಟಿದೆ. ಕುರುಕ್ಷೇತ್ರ ಯುದ್ಧ ಸಮರ್ಥವಾಗಿ ಎದುರಿಸುತ್ತೇವೆ. ಹೇಳುವುದಕ್ಕಿಂತ ಮಾಡುವುದು ಲೇಸು ಎಂಬಂತೆ ಕೆಲಸ ಮಾಡುತ್ತೇವೆ. ನಾಳೆಯಿಂದ ಜೆಡಿಎಸ್ ಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.

ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬರುತ್ತಾರೆ. ಆರೋಗ್ಯ ನೋಡಿಕೊಂಡು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬರುವವರಿದ್ದಾರೆ. ಪ್ರಚಾರದ ಕಾವು ಏರುತ್ತಿದೆ. ನನ್ನನ್ನೂ ಸೇರಿಕೊಂಡಂತೆ ನನ್ನ ಜೊತೆಗಿರುವವರು ಚುನಾವಣೆಯ ನಾಡಿ ಮಿಡಿತ ಬಲ್ಲವರಾಗಿದ್ದಾರೆ. ಆದ್ದರಿಂದ ಯಾರ ಭಯವೂ ನಮಗಿಲ್ಲ. ನಾವು ಗೆದ್ದೇ ಗೆಲ್ಲುತ್ತೇವೆ. ಶಿವಮೊಗ್ಗಕ್ಕೆ ಶಾಂತಿ ತರುತ್ತೇವೆ ಎಂದರು.


ಜೆಡಿಎಸ್ ಜಿಧ್ಯಕ್ಷ ಎಂ. ಶ್ರೀಕಾಂತ್, ಪ್ರಮುಖರಾದ ನಿಖಿಲ್, ನಾಗರಾಜ ಕಂಕಾರಿ, ಪಾಲಾಕ್ಷಿ, ಸತ್ಯನಾರಾಯಣ್, ರಾಮಕೃಷ್ಣ, ಬೊಮ್ಮನಕಟ್ಟೆ ಮಂಜುನಾಥ್, ಕಡಿದಾಳ್ ಗೋಪಾಲ್, ಸಿದ್ದಪ್ಪ, ರಘು, ಸಂಗಯ್ಯ, ಭಾಸ್ಕರ್ ಇದ್ದರು

Leave A Reply

Your email address will not be published.

error: Content is protected !!