ಇಂದು ಆನವಟ್ಟಿಗೆ ಶಿವಣ್ಣ, ಮೇ 2 ಕ್ಕೆ ತೀರ್ಥಹಳ್ಳಿಗೆ ರಾಹುಲ್ ಗಾಂಧಿ

0 44

ಶಿವಮೊಗ್ಗ: ಸೊರಬ ತಾಲೂಕು ಆನವಟ್ಟಿಯಲ್ಲಿ ಇಂದು ಮಧ್ಯಾಹ್ನ 12ಗಂಟೆಗೆ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರ ರೋಡ್ ಶೋ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್‌ನ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್. ರಮೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.


ಗೀತಾ ಶಿವರಾಜ್‌ಕುಮಾರ್ ಈಗಾಗಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅಭ್ಯರ್ಥಿ ಮಧು ಬಂಗಾರಪ್ಪ ಅವರೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ತಮ್ಮ ಪತಿ ಶಿವರಾಜ್‌ಕುಮಾರ್ ರವರೊಂದಿಗೆ ರೋಡ್‌ಶೋನಲ್ಲಿ ಭಾಗವಹಿಸಲಿದ್ದಾರೆ. ಈ ರೋಡ್ ಶೋ ಸುಮಾರು 2ಕಿ.ಮೀ. ಇರುತ್ತದೆ. ಮಧ್ಯಾಹ್ನ 4 ಗಂಟೆಗೆ ಆನವಟ್ಟಿಯ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಬಹಿರಂಗ ಸಭೆ ಇರುತ್ತದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಲಿದ್ದಾರೆ ಎಂದರು.


ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏ.30ರ ನಾಳೆ ಬೆಳಿಗ್ಗೆ 10 ಗಂಟೆಗೆ ಹಾಸನದಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಬರಲಿದ್ದಾರೆ. ಶಿವಮೊಗ್ಗದಲ್ಲಿ 10:30ಕ್ಕೆ ಪತ್ರಿಕಾಗೋಷ್ಠಿ ಇದ್ದು, 11:30ಕ್ಕೆ ಡಿವಿಎಸ್ ಕಾಂಪೋಸಿಟ್ ಕಾಲೇಜಿನ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ನಂತರ ಅವರು ಸೊರಬಕ್ಕೆ ತೆರಳುವರು ಎಂದರು.


ನಗರದಲ್ಲಿ ಕಾಂಗ್ರೆಸ್- ಬಿಜೆಪಿಗೂ ಮತ್ತು ಗ್ರಾಮಾಂತರದಲ್ಲಿ ಕಾಂಗ್ರೆಸ್- ಜೆಡಿಎಸ್‌ಗೂ ನೇರ ಸ್ಪರ್ಧೆ ಇರುತ್ತದೆ. ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲೂ ಜಯ ಭೇರಿ ಬಾರಿಸಲಿದೆ ಎಂದು ಹೆಚ್. ಎಸ್. ಸುಂದರೇಶ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗಳು ಈಗಾಲೇ ಪ್ರಚಾರ ಮುಂದುವರಿಸಿದ್ದು, ಕಾಂಗ್ರೆಸ್ ಪರ ಅಲೆ ಕಾಣುತ್ತಿದೆ. ಪಕ್ಷ ಬಿಟ್ಟು ಹೋದವರಿಂದ ಯಾವ ಪರಿಣಾಮವೂ ಆಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ನಾಯಕರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಮೇ 2ಕ್ಕೆ ರಾಹುಲ್ ಗಾಂಧಿ ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ ಎಂದರು
ಜಿಲ್ಲೆಯ ಸಾಗರ ಮತ್ತು ಶಿಕಾರಿಪುರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುತ್ತಿದ್ದ ಪಕ್ಷದ 21ಕಾರ್ಯಕರ್ತರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಪ್ರಮುಖವಾಗಿ ಶಿಕಾರಿಪುರದ ಎಸ್.ಸಿ. ವೀರೇಶ್, ಉಮೇಶ್, ರಾಘವೇಂದ್ರ ನಾಯ್ಕ್ ಹಾಗೂ ಸಾಗರದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ. ರಾಜನಂದಿನಿ, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಹುನಗೋಡು ರತ್ನಾಕರ್ ಮುಂತಾದವರಿದ್ದಾರೆ. ಆದರೆ ಶಿಕಾರಿಪುರದಲ್ಲಿ ಸ್ವತಂತ್ರ ಅಭ್ಯರ್ಥಿ ನಾಗರಾಜ ಗೌಡರನ್ನು ಉಚ್ಚಾಟಿಸಲು ಈಗಾಗಲೇ ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ಚಂದ್ರಭೂಪಾಲ್, ರವಿಕುಮಾರ್, ಮಧು, ಎಲ್. ಸತ್ಯನಾರಾಯಣ ರಾವ್, ಚಂದ್ರಶೇಖರ್ ಮುಂತಾದವರಿದ್ದರು.

Leave A Reply

Your email address will not be published.

error: Content is protected !!