ಏ.15 ರ ಬಳಿಕ ಬಾಳೆಬರೆ ಘಾಟ್ ಸಂಚಾರಕ್ಕೆ ಮುಕ್ತ ; ಮತ್ತೆ 10 ದಿನ ಅವಧಿ ವಿಸ್ತರಣೆ ಮಾಡಿದ್ದು ಯಾಕೆ ಗೊತ್ತಾ ?

0 48

ಶಿವಮೊಗ್ಗ : ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ (ಹುಲಿಕಲ್‌) ಘಾಟಿಯ ಕಾಂಕ್ರಿಟೀಕರಣ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತವಷ್ಟೇ ಬಾಕಿಯಿದೆ. ಕ್ಯೂರಿಂಗ್‌ ನಡೆಯುತ್ತಿದ್ದು, ಏ. 15ರ ಬಳಿಕ ಸಂಚಾರ ಪುನರಾರಂಭಗೊಳ್ಳುತ್ತಿದೆ.

ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಈ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರ ಅಗಲಗೊಳಿಸುವಿಕೆ, ಕಾಂಕ್ರಿಟೀಕರಣ, ರಕ್ಷಣ ಗೋಡೆ ನಿರ್ಮಾಣ ನಡೆಯುತ್ತಿದೆ.

ಏ. 15ಕ್ಕೆ ಮುಕ್ತ
ಕಳೆದ ಫೆ. 5ರಿಂದ ಏ. 5ರ ವರೆಗೆ ಕಾಮಗಾರಿ ಸಲುವಾಗಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಂಕ್ರಿಟೀಕರಣ ಮುಗಿದಿದೆ. ಕ್ಯೂರಿಂಗ್‌ ನಡೆಯುತ್ತಿದೆ. ಅಪಾಯಕಾರಿ ತಿರುವುಗಳಲ್ಲಿ ಅಗಲಗೊಳಿಸುವಿಕೆ ಹಾಗೂ ರಕ್ಷಣ ಗೋಡೆ ನಿರ್ಮಾಣವಾಗಿದೆ. ಶಿವಮೊಗ್ಗ ವ್ಯಾಪ್ತಿಯಲ್ಲಿ ಈವರೆಗೆ 2 ಕಿ.ಮೀ. ಕಾಂಕ್ರಿಟೀಕರಣ ನಡೆದಿದ್ದು, 500 ಮೀ.ಗಳಷ್ಟು ಬಾಕಿಯಿದೆ. ಇದಕ್ಕೆ ಹೆಚ್ಚುವರಿ 10 ದಿನಗಳ ಅಗತ್ಯವಿದೆ. ಆದರೂ ಕ್ಯೂರಿಂಗ್‌ ಪೂರ್ಣಗೊಳ್ಳುತ್ತಿದ್ದಂತೆ ಒಂದು ಬದಿಯಿಂದ ಸಂಚಾರಕ್ಕೆ ಅನುವು ಮಾಡಿಕೊಡುಲಾಗುತ್ತದೆ. ಏ. 15ರ ನಂತರ ಸಂಚಾರಕ್ಕೆ ಮುಕ್ತವಾಗುತ್ತದೆ.

ಬದಲಿ ಮಾರ್ಗ ಯಾವುದು ?

ತೀರ್ಥಹಳ್ಳಿ, ಆಗುಂಬೆ, ಸೋಮೇಶ್ವರ, ಹಾಲಾಡಿ ಬಸ್ರೂರು ಮಾರ್ಗವಾಗಿ ಕುಂದಾಪುರಕ್ಕೆ ಲಘುವಾಹನಗಳು ಸಂಚರಿಸಬಹುದಾಗಿದೆ. ಭಾರಿ ವಾಹನಗಳು ತೀರ್ಥಹಳ್ಳಿ, ಕಾನುಗೋಡು, ನಗರ, ಕೊಲ್ಲೂರು, ಮೂಲಕ ಕುಂದಾಪುರಕ್ಕೆ ಸಂಚರಿಸಬಹುದಾಗಿದೆ.

ಹೊಸನಗರ ಮೂಲಕ ಕುಂದಾಪುರಕ್ಕೆ ಸಂಚರಿಸುವ ಲಘು ಅಥವಾ ಭಾರಿ ವಾಹನಗಳು ಹೊಸನಗರ, ನಗರ ಹಾಗೂ ಕೊಲ್ಲೂರು ರಸ್ತೆಯ ಮೂಲಕ ಕುಂದಾಪುರಕ್ಕೆ ಸಂಚರಿಸಬಹುದಾಗಿದೆ.

ಅವಧಿ ವಿಸ್ತರಣೆಗೆ ಕಾರಣ ಏನು ?

ಅವಧಿ ವಿಸ್ತರಣೆಗೆ ಕಾಮಗಾರಿ ನಡೆಸುವ ಯಂತ್ರೋಪಕರಣಗಳು ಪದೇ ಪದೇ ದುರಸ್ತಿಗೆ ಬಂದ ಪರಿಣಾಮ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಏ.15 ರ ವರೆಗೆ ಕಾಮಗಾರಿ ಅವಧಿಯನ್ನ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.

error: Content is protected !!