ಕಾಂಗ್ರೆಸ್‌ಗೆ ತೀ.ನಾ. ಶ್ರೀನಿವಾಸ್ ರಾಜೀನಾಮೆ !

0 42

ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೆ ಸಾಗರದ ಹಿರಿಯ ಮುಖಂಡ ಸಾಗರದ ತೀ.ನಾ. ಶ್ರೀನಿವಾಸ್ ರಾಜೀನಾಮೆ ನೀಡಿದ್ದಾರೆ. 

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ತೀ.ನಾ. ಶ್ರೀನಿವಾಸ್, ಇತ್ತೀಚಿನ ದಿಗಳಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಆಗಾಗ ನಾನು ಪ್ರಸ್ತಾಪ ಮಾಡುತ್ತಲೂ ಇದ್ದೆ. ಬಹಳ ಮುಖ್ಯವಾಗಿ ಮಲೆನಾಡು ರೈತರ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಸಂಪೂರ್ಣ ವಿಫಲಗೊಂಡಿದೆ. ಹಣವಿದ್ದವರಿಗೆ ಮಾತ್ರ ಪಕ್ಷದಲ್ಲಿ ಬೆಲೆ ಕೊಡುತ್ತಾರೆ. ಈ ಎಲ್ಲಾ ಕಾರಣಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದರು.

ಮಲೆನಾಡು ರೈತ ಹೋರಾಟ ಸಮಿತಿಯಿಂದ ನನ್ನ ಹೋರಾಟ ಆರಂಭವಾಗಿದೆ. ಮಲೆನಾಡು ಭಾಗದ ರೈತರಿಗಾಗಿಯೆ ನನ್ನ ಹೋರಾಟವನ್ನು ನಿರಂತರವಾಗಿ ಮುಂದುವರಿಸುತ್ತೇನೆ ಮತ್ತು ಹೋರಾಟ ಸಮಿತಿಯಿಂದಲೆ ಪಕ್ಷೇತರನಾಗಿ ಸಾಗರ ವಿಧಾನ ಸಭೆಗೆ ಸ್ಪರ್ಧಿಸುತ್ತೇನೆ. ಯಾವ ಪಕ್ಷಕ್ಕೂ ನಾನು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

1986ರಲ್ಲಿ ನಾನು ಪುರಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತದಿಂದ ಗೆದ್ದುಬಂದೆ. ಕಾಗೋಡು ತಿಮ್ಮಪ್ಪನವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದರು. ಅಂದಿನಿಂದ ಸುಮಾರು 38 ವರ್ಷಗಳ ಕಾಲ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪಕ್ಷದ ಏಳಿಗೆಗಾಗಿ ದುಡಿದೆ. ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದೆ. ಬಿಜೆಪಿಯ ವಿರುದ್ಧ ಪ್ರಬಲ ಹೋರಾಟ ನಡೆಸಿದೆ. ಕಾಗೋಡು ತಿಮ್ಮಪ್ಪನವರ ಜೊತೆ ಸೇರಿಕೊಂಡು ಅರಣ್ಯ ಕಾಯ್ದೆ ಸೇರಿದಂತೆ ರೈತರ ಸಮಸ್ಯೆಗಳಿಗಾಗಿ ಬಹುದೊಡ್ಡ ಹೋರಾಟವನ್ನೇ ಮಾಡಿದೆ. ಆದರೂ ಕೂಡ ಕಾಂಗ್ರೆಸ್ ನನ್ನನ್ನು ಕಡೆಗಣಿಸಿತು ಎಂದರು.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕಾಂಗ್ರೆಸ್ ಪಕ್ಷ ನೋಡುವುದು ಬರೀ ಹಣ ಮಾತ್ರ. ನಿಮ್ಮ ಬಳಿ ಎಷ್ಟು ಕೋಟಿ ಇದೆ ಎಂದು ಕೇಳುತ್ತಾರೆಯೇ ಹೊರತು ಎಷ್ಟು ಜನ ಇದ್ದಾರೆ ಎಂದು ಕೇಳುವುದಿಲ್ಲ. ಗಂಟು ನೋಡುತ್ತಾರೆಯೇ ವಿನಃ ನಂಟು ನೋಡುವುದಿಲ್ಲ. ಹಣದ ಜಾತ್ರೆ ಮಾಡಿ ಚುನಾವಣೆಯ ಹಬ್ಬ ಮಾಡಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಬೇರೆ ಬೇರೆ ಪಕ್ಷದಿಂದ ಬಂದವರಿಗೆ ಮೂರು ಮೂರು ಹುದ್ದೆ ನೀಡುತ್ತಾರೆ. ವಕ್ತಾರನ ಹುದ್ದೆ ಕೊಡುತ್ತಾರೆ. ನಿಜವಾದ ಕಾರ್ಯಕರ್ತರನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.

ಇನ್ನು ನನ್ನ ಹೋರಾಟ ರೈತರ ಪರವಾಗಿಯೇ ಇರುತ್ತದೆ. ಚುನಾವಣೆಗೆ ಸ್ಮತಂತ್ರವಾಗಿ ಸ್ಪರ್ಧಿಸುತ್ತೇನೆ. ಸಾಗರದ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮುನ್ನವೇ ಚುನಾವಣೆಗೆ ನಿಂತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದೆ. ಒಬ್ಬ ಹೋರಾಟಗಾರನ ಹಿಂದೆ ಜನರು ಇದ್ದೇ ಇರುತ್ತಾರೆ. ಅವರ ಪ್ರೀತಿ ವಿಶ್ವಾಸ ನನ್ನ ಮೇಲಿದೆ. ರಾಜಕಾರಣ ಮತ್ತು ಹೋರಾಟ ಈ ಎರಡನ್ನು ಜೊತೆಜೊತೆಯಾಗಿಯೆ ತೆಗೆದುಕೊಂಡು ಹೋಗುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಮೂರ್ತಿ, ಸುಭಾಷ್ ಇದ್ದರು.

Leave A Reply

Your email address will not be published.

error: Content is protected !!