ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವುದೇ ಜೆಡಿಎಸ್‌ನ ಪ್ರಮುಖ ಗುರಿ ; ಹೆಚ್‌ಡಿಕೆ

0 32

ರಿಪ್ಪನ್‌ಪೇಟೆ; ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮತ್ತು ಹಗರಣಗಳ ಸರ್ಕಾರವಾಗಿದ್ದು ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಅಭಿವೃದ್ದಿಯ ಅರಿವು ಇಲ್ಲದಂತಾಗಿದೆ. ಕೇವಲ ಭ್ರಷ್ಟಾಚಾರವೇ ಇವರ ಆಡಳಿತದ ಮಾದರಿಯಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.


ರಿಪ್ಪನ್‌ಪೇಟೆ ಸಮೀಪದ ಹುಂಚದಕಟ್ಟೆಯಲ್ಲಿ ಪಂಚರತ್ನ ಯಾತ್ರೆ ಮತ್ತು ಗ್ರಾಮವಾಸ್ತವ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ಹಾಗೂ ರಾಜ್ಯದಲ್ಲಿ ಮೂರುವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರೈತರ ಮತ್ತು ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ವಿಫಲವಾಗಿದ್ದು ಬರೀ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಭಾಗಿಯಾಗಿ ರಾಷ್ಟ್ರ ಮತ್ತು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದು ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವುದೆ ಜೆಡಿಎಸ್‌ನ ಪ್ರಮುಖ ಗುರಿಯಾಗಿದೆ ಎಂದರು.


ರಾಜ್ಯದಲ್ಲಿ ಬಡವರ ಬದುಕಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದಾಗಿ ಕಳೆದ 74 ದಿನಗಳಿಂದ ರಾಜ್ಯದ 20 ಜಿಲ್ಲೆಗಳಲ್ಲಿನ 73 ಕಡೆಯಲ್ಲಿ 35 ರಿಂದ 40 ಹಳ್ಳಿಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಮನೆಬಾಗಿಲಿಗೆ ತೆರಳಿ ಸಮಸ್ಯೆಯನ್ನು ಖುದ್ದು ಪರಿಶೀಲನೆ ನಡೆಸುವುದರೊಂದಿಗೆ ಪಕ್ಷದ ಸಂಘಟನೆ ಮತ್ತು ಅಭ್ಯರ್ಥಿಗಳ ಗೆಲುವಿಗೆ ತಮ್ಮಗಳ ಅಶೀರ್ವಾದ ಬಯಸುತ್ತಿರುವುದಾಗಿ ಹೇಳಿದರು.


ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರ ಸಂಕಷ್ಟವನ್ನು ಬಗೆಹರಿಸದ ಸರ್ಕಾರ ಇನ್ನೂ ಹದಿನೈದು ದಿನಗಳಲ್ಲಿ ಬಗೆ ಹರಿಸುತ್ತೆವೆಂದು ವಾಗ್ದಾನ ನೀಡಿರುವುದನ್ನು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೋ ತಿಳಿಯದು ಆದರೆ ಈಡೇರಿದಲ್ಲಿ ಮೊದಲು ಸರ್ಕಾರಕ್ಕೆ ನಾನು ಅಭಿನಂದಿಸುತ್ತೇನೆಂದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವ ಬಗ್ಗೆ ಆಶಾಭಾವನೆ ಹೊಂದಿದ್ದು ನೂತನ ಸರ್ಕಾರದಲ್ಲಿ ರೈತರಿಗೆ ವಿಶೇಷವಾದಂತಹ ಯೋಜನೆಗಳನ್ನು ರೂಪಿಸಲಾಗುವುದು ಪ್ರಗತಿಪರ ರೈತರನ್ನು ಗುರುತಿಸಿ ಅವರುಗಳ ಸಲಹೆ ಸಹಕಾರ ಪಡೆದು ಉತ್ತಮ ರೈತ ಯೋಜನೆ ಅನುಷ್ಟಾನಗೊಳಿಸುವ ಇರಾದೆ ನಮ್ಮ ಸರ್ಕಾರದಾಗಿದೆ ಎಂದರು.
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಲೆಚುಕ್ಕಿ ರೋಗಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆಗೊಳಿಸುವುದು ಮುಖ್ಯವಲ್ಲ ರೋಗ ನಿಯಂತ್ರಣಕ್ಕೆ ಯೋಜನೆಯಡಿ ಸಂಶೋಧನೆ ಎಷ್ಟು ಫಲಪ್ರದವಾಗಿದೆ ಎಂಬುದರ ಬಗ್ಗೆ ಸರ್ಕಾರಗಳು ಜಾಗೃತವಾಗಬೇಕು ಎಂದರು.


ಯಡಿಯೂರಪ್ಪನವರದು ಯಾವ ರಾಜಕಾರಣ:

ಕೇಂದ್ರದ ಗೃಹ ಸಚಿವ ಅಮಿತ್ ಶಾ ರವರು ರಾಜ್ಯಕ್ಕೆ ಬಂದು ದೇವೇಗೌಡರ ಕುಟುಂಬ ಪೂರ್ಣ ರಾಜಕಾರಣದಲ್ಲಿ ತೊಡಗಿದರೆ ಅವರ ಮನೆ ಕೆಲಸ ಮಾಡುವವರು ಯಾರು ? ಎಂದು ಪ್ರಶ್ನಿಸಿದ್ದಾರೆ. ಅವರ ಪಕ್ಕದಲ್ಲಿ ಕುಳಿತ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ವಿಚಾರಿಸಿದರೆ ಸಾಕಿತ್ತು ಆಗ ಗೊತ್ತಾಗುತ್ತಿತ್ತು ಮನೆಗೆಲಸ ಮಾಡುವವರು ಯಾರು ಎಂಬುದು ಎಂದು ಮಾರ್ಮಿಕವಾಗಿ ಹೇಳಿದರು.


ರೈತರ ಸಾಲ ಮನ್ನಾ ಫಲಾನುಭವಿಗಳಿಗೆ ಸರ್ಕಾರ ಇನ್ನೂ 2800 ಕೋಟಿ ಹಣ ವಿತರಣೆ ಮಾಡಿಲ್ಲ. ಸಾಕಷ್ಟು ರೈತರು ಸಾಲಮನ್ನಾದಿಂದ ವಂಚಿತರಾಗಿದ್ದಾರೆಂದು ಕಳವಳ ವ್ಯಕ್ತಪಡಿಸಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಬೆಳೆ ಸಾಲ ಮನ್ನಾವಾಗಿದ್ದರೂ ಹೊಸ ಸಾಲಸೌಲಭ್ಯ ದೊರೆಯದೆ ಬೇರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಕ್ಲಿಯರೆಸ್ಸ್ ಕೊಡದೆ ಸತಾಯಿಸುತ್ತಿರುವುದರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಕಿಡಿ ಕಾರಿದರು.


ವರ್ಕ್ಔಟ್ ಆದ ಡಿಎನ್ಎ ಗುದ್ದು:

ನಾನು ಸಾರ್ವಜನಿಕವಾಗಿ ಡಿಎನ್ಎ ಬಗ್ಗೆ ಪ್ರಸ್ತಾಪಿಸಿದ ಕೊಡಲೇ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂಲೆಗುಂಪು ಮಾಡಲು ಹೊರಟ ರಾಜ್ಯ ರಾಷ್ಟ್ರ ನಾಯಕರು ಎಚ್ಚೆತ್ತು
ಮುನ್ನೆಲೆಗೆ ತಂದಿದ್ದಾರೆೃದು ಹೇಳುವುದರೊಂದಿಗೆ ಡಿಎನ್ಎ ಗುದ್ದು ವರ್ಕ್ಔಟ್ ಆಗಿದೆ ಎಂದರು.


ಈ ಸಂದರ್ಭದಲ್ಲಿ ಎಂ.ಎಲ್.ಸಿ. ಭೋಜೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ ಶ್ರೀಕಾಂತ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್, ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಇನ್ನಿತರರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Leave A Reply

Your email address will not be published.

error: Content is protected !!