ಮುಂದಿನ 48 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ

0 95

ಶಿವಮೊಗ್ಗ/ಚಿಕ್ಕಮಗಳೂರು : ಮುಂದಿನ 48 ಗಂಟೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುಡುಗು ಅಥವಾ ಆಲಿಕಲ್ಲು ಸಹಿತ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶವು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಲಬುರಗಿಯಲ್ಲಿ 41.5 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಬೆಳಗ್ಗೆ ಬಿಸಿಲಿರಲಿದ್ದು, ಕ್ರಮೇಣವಾಗಿ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ, ಸಂಜೆ ಅಥವಾ ರಾತ್ರಿ ವೇಳೆ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಎಚ್​ಎಎಲ್​ನಲ್ಲಿ 35.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 36.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 36.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ನಿನ್ನೆ ಶಿವಮೊಗ್ಗದಲ್ಲಿ ಗುಡುಗು, ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಮಳೆಯಾಗುತ್ತಿದ್ದಂತೆ ಖುಷಿಯಾದರು. ದಿಢೀರ್‌ ಮಳೆಯಿಂದಾಗಿ ಜನರು ಅಂಗಡಿಗಳು, ಕಟ್ಟಡಗಳ ಮುಂದೆ ನಿಲ್ಲಬೇಕಾಯಿತು.

ಕಳೆದ ಕೆಲವು ದಿನದಿಂದ ಭಾರಿ ಬಸಿಲಿಗೆ ಶಿವಮೊಗ್ಗ ಜಿಲ್ಲೆಯು ಕಾದ ಕಾವಲಿಯಂತಾಗಿತ್ತು. ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ತೀವ್ರ ಸೆಖೆ, ಧಗೆಯಿಂದಾಗಿ ಜನರು ಹೈರಾಣಾಗಿದ್ದರು. ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಿ ಆಸ್ಪತ್ರೆಗೆ ಅಲೆಯುವಂತಾಗಿತ್ತು. ಅಲ್ಲದೆ, ಸೆಖೆ, ದಾಹ ನೀಗಿಸಿಕೊಳ್ಳಲು ತಂಪುಪಾನಿಯ, ಎಳನೀರು, ಏರ್‌ ಕೂಲರ್‌, ಫ್ಯಾನುಗಳ ಮೊರೆ ಹೋಗಿದ್ದರು. ಈಗ ಮಳೆ ಆಗಿರುವುದರಿಂದ ಶಿವಮೊಗ್ಗ, ಭದ್ರಾವತಿಯಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ.

Leave A Reply

Your email address will not be published.

error: Content is protected !!