ರಿಪ್ಪನ್‌ಪೇಟೆಯಲ್ಲಿ ಮಾ.19ರಂದು ಸಹಕಾರ ಸಂಘದ ಆಡಳಿತ ಸಂಕೀರ್ಣ ಕಟ್ಟಡ ಮತ್ತು ಬಹುಸೇವಾ ವಾಣಿಜ್ಯ ಗೋದಾಮು ಉದ್ಘಾಟನೆ

0 47

ಶಿವಮೊಗ್ಗ: ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಮತ್ತು ಹೊಸನಗರ ತಾಲೂಕು ಶಾಖೆ, ರಿಪ್ಪನ್‌ಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಾ.19ರಂದು ಬೆಳಿಗ್ಗೆ 10.30ಕ್ಕೆ ಸಹಕಾರ ಸಂಘದ ಆಡಳಿತ ಸಂಕೀರ್ಣ ಕಟ್ಟಡ ಮತ್ತು ಬಹುಸೇವಾ ವಾಣಿಜ್ಯ ಗೋದಾಮು ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ ತಿಳಿಸಿದರು.

ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿಗೂ ಮತ್ತು ಜಾನಪದಕ್ಕೂ ಪರಸ್ಪರ ಸಂಬಂಧವಿದೆ. ಹೀಗಾಗಿ ಸಹಕಾರ ಸಂಘದ ಕಟ್ಟಡಗಳ ಉದ್ಘಾಟನೆ ಮತ್ತ ಜಾನಪದ ಸಮ್ಮೇಳನ ಈ ಎರಡನ್ನೂ ಜೋಡಿಸಿಕೊಂಡ ಒಂದು ಮಾದರೀ ಕಾರ್ಯಕ್ರಮವನ್ನು ನಾವು ನೀಡುತ್ತಿದ್ದೇವೆ ಎಂದರು.

ಡಿ. ಮಂಜುನಾಥ್ ಮಾತನಾಡಿ, ಜಾನಪದ ಸಮ್ಮೇಳನವು ಜಿಲ್ಲೆಯಲ್ಲಿ ನಾಲ್ಕನೆಯದ್ದಾಗಿದೆ. ಇದರ ಅಂಗವಾಗಿ ರಿಪ್ಪನ್‌ಪೇಟೆಯ ಜೆಎಸ್‌ಬಿ ಕಲ್ಯಾಣ ಮಂದಿರದಿಂದ ಬೆಳಿಗ್ಗೆ 9-30ಕ್ಕೆ ವಿವಿಧ ಕಲಾತಂಡಗಳ ಜಾನಪದ ನಡಿಗೆಯನ್ನು ಆಯೋಜಿಸಿದ್ದು, ರಿಪ್ಪನ್‌ಪೇಟೆಯ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಪಿ. ರಾಜು ಇದಕ್ಕೆ ಚಾಲನೆ ನೀಡುವರು. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಜಾನಪದ ಕಲಾವಿದ ಆಂಜನೇಯ ಜೋಗಿ ಅವರು ಉಪಸ್ಥಿತರಿರುತ್ತಾರೆ. ಜಾನಪದ ಕಲೆ ಉಳಿಸಿ ಬೆಳೆಸುವ ಬಗ್ಗೆ ವಿವಿಧ ಕಲೆಗಳ ಬಗ್ಗೆ ವಿದ್ವಾಂಸರುಗಳು ಮಾತನಾಡುವರು ಎಂದರು.

ದೇವಿ ಕುಣಿತ, ಸುಗ್ಗಿ ಕುಣಿತ, ತತ್ವಪದ, ಜೋಗಿ, ಗೀಗೀ, ಚೌಡಿಕೆ, ಬೀಸುವ, ಕುಟ್ಟುವ ಪದ, ವೀರಗಾಸೆ, ಡೊಳ್ಳು ಸೇರಿದಂತೆ ಸುಮಾತು 21 ಕಲಾ ಪ್ರಕಾರಗಳ ತಂಡಗಳು ಇದರಲ್ಲಿ ಭಾಗವಹಿಸುತ್ತವೆ. ಇಡೀ ದಿನ ಜಾನಪದ ಸಂಭ್ರಮ ನಡೆಯುತ್ತದೆ. ಜಿಲ್ಲೆಯ ಹಲವು ಕಲಾತಂಡಗಳು ಇದರಲ್ಲಿ ಭಾಗವಹಿಸುತ್ತಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಾನಪದ ತಜ್ಞ ಪ್ರೊ ಹಿ.ಶಿ. ರಾಮಚಂದ್ರ ಗೌಡರು ಹಾಗೂ ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ಭಾಗವಹಿಸುತ್ತಾರೆ ಎಂದರು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ ಮಾತನಾಡಿ, ಸಹಕಾರ ಸಂಘದ ಆವರಣದಲ್ಲಿ ಸುಮಾರು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಘದ ಆಡಳಿತ ಸಂಕೀರ್ಣ ಕಟ್ಟಡ, ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುಸೇವಾ ವಾಣಿಜ್ಯ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 10-30ಕ್ಕೆ ನಡೆಯಲಿದೆ. ಸಭಾ ಕಾರ್ಯಕ್ರಮ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಭಾಭವನದಲ್ಲಿ ನಡೆಯಲಿದೆ ಎಂದರು.

ಆಡಳಿತ ಸಂಕೀರ್ಣದ ವಿವಿಧ ವಿಭಾಗದ ಕಟ್ಟಡಗಳನ್ನು,
ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಎಸ್.ಎಲ್. ಭೋಜೇಗೌಡ, ವಿಧಾನ ಸಭಾ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ ಎಂದ ಅವರು, ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಪದಾಧಿಕಾರಿಗಳು ನಬಾರ್ಡ್ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಸಹಕಾರಿ ಯೂನಿಯನ್ನಿನ ಪದಾಧಿಕಾರಿಗಳು ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಮತಾ ಶಿವಣ್ಣ, ಮಂಜುನಾಥ ಕಾಮತ್, ಸೋಮಿನಕಟ್ಟಿ ಮುಂತಾದವರಿದ್ದರು.

Leave A Reply

Your email address will not be published.

error: Content is protected !!