Categories: ShivamoggaSoraba

ಸಹನೆ ಸದ್ಗುಣಗಳಿಂದ ಕಷ್ಟಗಳು ದೂರ ; ರಂಭಾಪುರಿ ಶ್ರೀಗಳು

ಸೊರಬ : ಮಾನವೀಯ ಆದರ್ಶ ಮೌಲ್ಯಗಳಿಂದ ಬದುಕು ಶ್ರೀಮಂತಗೊಳ್ಳುತ್ತದೆ. ಸದಾಚಾರ ಸಂಸ್ಕೃತಿ ಪಾಲನೆಯಿಂದ ಜೀವನದಲ್ಲಿ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಒಂದು ಕ್ಷಣದ ಸಹನೆ ಬೆಟ್ಟದಷ್ಟು ಕಷ್ಟಗಳನ್ನು ದೂರ ಮಾಡಬಲ್ಲದು. ಒಂದು ಕ್ಷಣದ ದುಡುಕಿನಿಂದ ಇಡೀ ಜೀವನ ನಾಶವಾಗಬಹುದೆಂಬುದನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ದುಗ್ಲಿ ಕ್ಷೇತ್ರದ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಜಾತ್ರಾ ಮಹೋತ್ಸವ ಹಾಗೂ ಲಿಂ.ಮುರುಘೇಂದ್ರ ಶ್ರೀಗಳವರ 5ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಕಣ್ಣು ಚೆನ್ನಾಗಿದ್ದರೆ ನಾವು ಜಗತ್ತನ್ನು ನೋಡಬಹುದು. ನಾಲಿಗೆ ನಡತೆಗಳು ಚೆನ್ನಾಗಿದ್ದರೆ ಜಗತ್ತು ನಮ್ಮನ್ನು ನೋಡುತ್ತದೆ. ಜೀವನದಲ್ಲಿ ಆದರ್ಶ ವ್ಯಕ್ತಿಗಳ ಸ್ನೇಹವನ್ನು ಸಂಪಾದಿಸಿಕೊಂಡು ಬಾಳಬೇಕು. ಕನ್ನಡಿ ಸುಳ್ಳು ಹೇಳುವುದಿಲ್ಲ. ನೆರಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಸುಳ್ಳು ಹೇಳದ ಸದಾ ಜೊತೆಗಿರುವ ನಂಬಿಗೆಯ ಸ್ನೇಹಿತರನ್ನು ಸಂಪಾದಿಸಿ ಬಾಳಿದರೆ ಬದುಕಿಗೊಂದು ಮೌಲ್ಯ ಬರುತ್ತದೆ. ಮನುಷ್ಯ ಜೀವನದಲ್ಲಿ ಭೌತಿಕ ಸಂಪತ್ತಿಗಿಂತ ಮಾನಸಿಕ ಶಾಂತಿ ನೆಮ್ಮದಿ ಬಲು ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನ ದರ್ಶನದ ಸೂತ್ರಗಳನ್ನು ಪರಿಪಾಲಿಸಿ ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಕೀರ್ತಿ ವೀರಶೈವ ಧರ್ಮದ ಮೂಲ ಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ.

ಲಿಂ.ಮುರುಘೇಂದ್ರ ಶ್ರೀಗಳವರಿಂದ ಸ್ಥಾಪಿತಗೊಂಡ ಶ್ರೀ ಮಠದಲ್ಲಿ ಪ್ರತಿ ವರುಷ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ನಿಮಿತ್ಯ ಹಲವಾರು ಜನ ಹಿತಾತ್ಮಕವಾದ ಕಾರ್ಯಕ್ರಮಗಳನ್ನು ಇಂದಿನ ಮಠದ ಪಟ್ಟಾಧ್ಯಕ್ಷರಾದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವುದು ತಮಗೆ ಅತೀವ ಸಂತೋಷ ತಂದಿದೆ ಎಂದರು.

ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ. ಜೀವನದಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಎದುರಿಸುವಂಥ ಆತ್ಮ ಬಲ ಬೆಳೆದು ಬರಲು ಅಧ್ಯಾತ್ಮ ಚಿಂತನೆಗಳ ಅವಶ್ಯಕತೆಯಿದೆ. ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಶ್ರೀಗಳವರು ಭಕ್ತ ಸಂಕುಲದ ಶ್ರೇಯಸ್ಸಿಗಾಗಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿರುವುದು ಸ್ತುತ್ಯವಾದುದೆಂದರು.

ನೇತೃತ್ವ ವಹಿಸಿದ ದುಗ್ಲಿ-ಕಡೇನಂದಿಹಳ್ಳಿ ತಪೋಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಉತ್ಕೃಷ್ಟ ಸಂಸ್ಕೃತಿಯನ್ನು ಬೆಳೆಸುವುದೇ ಈ ಸಮಾರಂಭದ ಮೂಲ ಆಶಯ. ವೀರಶೈವ ಧರ್ಮ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪುನರುತ್ಥಾನಗೊಳಿಸಿ ಜನರನ್ನು ಸನ್ಮಾರ್ಗದತ್ತ ಕರೆ ತರುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ. ಪ್ರತಿ ವರುಷ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ಮತ್ತು ಲಿಂ. ಮುರುಘೇಂದ್ರ ಶ್ರೀಗಳವರ ಸದಾಶಯ ಸಂಕಲ್ಪಗಳು ಸಾಕಾರಗೊಳ್ಳುತ್ತಿರುವುದು ಈ ಭಾಗದ ಭಕ್ತರಿಗೆ ಸಂತೋಷ ತಂದಿರುವುದನ್ನು ವರ್ಣಿಸಲು ನಮ್ಮಲ್ಲಿ ಯಾವುದೇ ಪದಗಳಿಲ್ಲ ಎಂದರು.

ಈ ಪವಿತ್ರ ಸಮಾರಂಭದಲ್ಲಿ ಜಡೆಯ ಮಹಾಂತ ಸ್ವಾಮಿಗಳು, ಶಾಂತಪೂರ ಶಿವಾನಂದ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಯಲಬುರ್ಗಾದ ಶಿವಲಿಂಗ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಮಾಜಿ ಶಾಸಕರಾದ ವಿ.ಎಸ್.ಪಾಟೀಲ್, ಶಿವಮೊಗ್ಗದ ಕೆ.ಪಿ.ರುದ್ರೇಗೌಡ ಗಿಣಿವಾಲ, ಸೊರಬದ ನಾಗರಾಜಗೌಡ್ರ ಚಿಕ್ಕಾವಲಿ, ಬಸವರಾಜಪ್ಪ ಬಾರಂಗಿ, ಸಿ.ಪಿ.ಈರೇಶಗೌಡ್ರ, ಶಿರಸಿಯ ಬಸವರಾಜ ಚಕ್ರಸಾಲಿ, ಶಿವಲಿಂಗಯ್ಯ ಎಸ್.ಅಲ್ಲಯ್ಯನವರಮಠ, ಶಂಕರ್ ಶೇಟ್, ಆನಂದಪ್ಪ, ಲತಾ ಹೆಚ್.ಡಿ., ಮಲ್ಲಮ್ಮ ಕಬ್ಬೂರು, ಚಂದ್ರಪ್ಪ ಹೊಸೂರು, ರೂಪಾ ಪರಶುರಾಮ ಮುಖ್ಯ ಅತಿಥಿಳಾಗಿದ್ದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಮತ್ತು ಕಡೇನಂದಿಹಳ್ಳಿ ಶಿಕ್ಷಕಿ ಕರಿಬಸಮ್ಮ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ ಭಕ್ತ ಸಮೂಹದ ಮಧ್ಯೆ ಸಂಭ್ರಮದಿಂದ ಜರುಗಿತು. ಸಮಾರಂಭದ ನಂತರ ಬಂದ ಭಕ್ತರೆಲ್ಲರಿಗೂ ಅನ್ನದಾಸೋಹ ನೆರವೇರಿತು.

Malnad Times

Recent Posts

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

50 mins ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

1 hour ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

6 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

8 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

21 hours ago

ಹೆಮ್ಮಕ್ಕಿ ಶ್ರೀ ಭದ್ರಕಾಳಿ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಜೀರ್ಣಾಷ್ಟಬಂಧ ಮತ್ತು ಬ್ರಹ್ಮ ಕಲಶಾಭಿಷೇಕ

ಕಳಸ : ತಾಲ್ಲೂಕಿನ ಹೆಮ್ಮಕ್ಕಿಯ ಶ್ರೀ ಭದ್ರಕಾಳಿ ಅಮ್ಮನವರಿಗೆ ಮತ್ತು ಶ್ರೀ ಸೋಮೇಶ್ವರ ಸ್ವಾಮಿಗೆ ಮೇ 01 ರಿಂದ ಮೇ…

23 hours ago