ಸಾಕಾರಗೊಂಡ ಲೋಕಸಭಾ ಕ್ಷೇತ್ರದ ಜನತೆಯ ರೈಲ್ವೆ ಕನಸುಗಳು ;
ಸರ್ಕಾರಕ್ಕೆ ಬಿವೈಆರ್ ಧನ್ಯವಾದ

0 57


ಶಿವಮೊಗ್ಗ: ಸಂಸದರಾದ ಬಿ.ವೈ.ರಾಘವೇಂದ್ರ ಅವರು ದಿನಾಂಕ: 22-05-2023 ರಂದು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಯ ಮಹಾಪ್ರಬಂಧಕರಾದ ಸಂಜೀವ್ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ರೈಲ್ವೆ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದರು.


ತಾಳಗುಪ್ಪ, ಶಿವಮೊಗ್ಗ ನಗರ, ಸಾಗರ ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲು ಮಾನ್ಯ ಸಂಸದರು ರೈಲ್ವೆ ಇಲಾಖೆಯನ್ನು ಒತ್ತಾಯಿಸುತ್ತಲೇ ಇದ್ದರ ಫಲವಾಗಿ ಕೇಂದ್ರ ಸರ್ಕಾರವು 2023-24ರ ಬಜೆಟ್ ನಲ್ಲಿ ಘೋಷಿಸಿದ ‘ಅಮೃತ್ ಭಾರತ್ ಯೋಜನೆ” ಯಡಿ, ರೂ. 22.5 ಕೋಟಿಗಳ ವೆಚ್ಚದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣವನು ರೂ. 19.28 ಕೋಟಿಗಳ ವೆಚ್ಚದಲ್ಲಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣವನ್ನು ಮತ್ತು ರೂ. 21.10 ಕೋಟಿಗಳ ವೆಚ್ಚದಲ್ಲಿ ಸಾಗರ ರೈಲ್ವೆ ನಿಲ್ದಾಣವನ್ನು ಹಾಗೂ ರೂ. 33.00 ಕೋಟಿಗಳ ವೆಚ್ಚದಲ್ಲಿ ಶಿವಮೊಗ್ಗ ಗೂಡ್ಸ್ ಯಾರ್ಡ್ ಅನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ರೈಲ್ವೆ ಇಲಾಖೆಯು ಅನುದಾನ ಒದಗಿಸಿದೆ.
ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು (ಗ್ರಾನೇಟ್ ನೆಲಹಾಸಿನ ಪ್ಲಾಟ್ ಫಾರಂ, ಡಿಜಿಟಲ್ ಸಿಗ್ನಲ್ಸ್, ಪ್ಲಾಟ್ ಫಾರಂ ಶೆಲ್ಪರ್, ಪಾಕಿರ್ಂಗ್ ಜಾಗದಲ್ಲಿ ಶೆಡ್ ನಿರ್ಮಾಣ, ಕಾಂಪೌಂಡ್ ವಾಲ್ ನಿರ್ಮಾಣ, ಸರ್ಕುಲೇಟಿಂಗ್ ಏರಿಯಾ ಅಭಿವೃದ್ಧಿ, ಸ್ಪೇಷನ್ ನಿಲ್ದಾಣದ ಸೌಂದರೀಕರಣ, ನಿಲ್ದಾಣದ ಮುಂಭಾಗದ ಉದ್ಯಾವನ, ಫೂಟ್ ಓವರ್ ಬ್ರಿಡ್, ಆಧುನಿಕ ಶೌಚಾಲಯಗಳು, ಉತ್ತಮ ಗುಣಮಟ್ಟದ ವಿದ್ಯುತ್ ಬೆಳಕಿನ ವ್ಯವಸ್ಥೆ, ಸಿ.ಸಿ.ಟಿ.ವಿ. ರೈಲ್ವೆ ಉದ್ಘೋಷಣಾ ವ್ಯವಸ್ಥೆ ಇಂತಹ ಹಲವಾರು ಸವಲತ್ತುಗಳನ್ನು ಒದಗಿಸುವ ಯೋಜನೆಯು ಮಂಜೂರಾತಿ ಗೊಂಡಿದೆ. ಹಾಗೆಯೇ ಶಿವಮೊಗ್ಗ ಗೂಡ್ಸ್ ಯಾರ್ಡನಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ರಸಗೊಬ್ಬರ, ಪಡಿತರ ಧಾನ್ಯ, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯ ವಸ್ತುಗಳನ್ನು ಶೀಘ್ರವಾಗಿ ಲಭ್ಯವಾಗುವಂತೆ ಮಾಡಲು ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ರೈಲ್ವೆ ಉನ್ನತಾಧಿಕಾರಿಗಳು ತಿಳಿಸಿರುತ್ತಾರೆ.


ಸುಮಾರು ರೂ. 100 ಕೋಟಿಗಳ ಅನುದಾನವನ್ನು ಈ ನಾಲ್ಕು ರೈಲ್ವೆ ನಿಲ್ದಾಣ / ಯಾರ್ಡ್ ಗಳ ಅಭಿವೃದ್ಧಿಗಾಗಿ ಒದಗಿಸಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಸಂಸದರು ಸಲ್ಲಿಸಿದ್ದಾರೆ.


2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಮಲೆನಾಡಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗುವ ರೂ.1,200 .ಕೋಟೆಗಳ ಅಂದಾಜು ವೆಚ್ಚದಲ್ಲಿ ಮಂಜೂರಾಗಿರುವ ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ಯೋಜನೆಯ ಮೊದಲನೇ ಹಂತವಾದ ಶಿವಮೊಗ್ಗ-ಶಿಕಾರಿಪುರ (46 ಕಿ.ಮೀ) ನಡುವಿನ ಕಾಮಗಾರಿಗೆ ಅಗತ್ಯವಿರುವ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿಯನ್ನು ನಿರ್ವಹಿಸಲು ಗುತ್ತಿಗೆದಾರರನ್ನು ಸಹ ನಿಗದಿಪಡಿಸಲಾಗಿದೆ. ದಿನಾಂಕ: 27.02.2023 ರಂದು ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯರವರ ಅಮೃತ ಹಸ್ತದಿಂದ ಶಿಲಾನ್ಯಾಸಗೊಂಡಿರುವ ಈ ಯೋಜನೆಯ ಕಾಮಗಾರಿಯ ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿದ್ದು, ಮುಂದಿನ ವಾರದಿಂದ ಕಾಮಗಾರಿಯನ್ನು ಪ್ರಾರಂಭಿಸಿ 2025ರ ಡಿಸೆಂಬರ್ ವೇಳೆಗೆ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.


ಭದ್ರಾವತಿಯ ಕಡದಕಟ್ಟೆ ಹತ್ತಿರ ರೈಲ್ವೆ ಎಲ್‍ಸಿ 33, ಶಿವಮೊಗ್ಗ ನಗರದ ಸವಳಂಗ ರಸ್ತೆಯ ಎಲ್‍ಸಿ 49 ಹಾಗೂ ಕಾಶಿಪುರ ಗೇಟ್ ಬಳಿಯ ಎಲ್‍ಸಿ 52 ರ ಬದಲಿಗೆ ನಿರ್ಮಿಸಲಾಗುತ್ತಿರುವ ROB/RUB ಗಳ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಅವಳಿ ನಗರಗಳ ವಾಹನಗಳ ದಟ್ಟಣೆಯ ಸಮಸ್ಯೆಗೆ ಈ ಯೋಜನೆಗಳನ್ನು ಅತ್ಯಂತ ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯತೆಯನ್ನು ತಿಳಿಯಪಡಿಸಲಾಗಿ ಇವುಗಳನ್ನು ಕ್ರಮವಾಗಿ ಡಿಸೆಂಬರ್ 2023. ಅಕ್ಟೋಬರ್ 2023 ಹಾಗೂ ಜೂನ್ 2023ರ ಒಳಗೆ ಪೂರ್ಣಗೊಳಿಸುವುದಾಗಿ ಪ್ರಧಾನ ವ್ಯವಸ್ಥಾಪಕರು ತಿಳಿಸಿರುತ್ತಾರೆ.


ಶಿವಮೊಗ್ಗ ಜಿಲ್ಲೆಯ ಮೊದಲ ಕೋಚಿಂಗ್ ಡೀಪೋ ಆದಂತಹ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡೀಪೋ ಅನ್ನು 2020-21ರ ಮುಂಗಡ ಪತ್ರದಲ್ಲಿ ಸುಮಾರು 100.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿದ್ದು, ರಾಜ್ಯ ಸರ್ಕಾರವು ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. 3 ಪ್ಲ್ಯಾಟ್‍ಫಾರಂಗಳನ್ನೊಳಗೊಂಡ ಕೋಟೆಗಂಗೂರಿನ ನೂತನ ರೈಲ್ವೆ ನಿಲ್ದಾಣ, 2 ಪಿಟ್‍ಲೈನ್, 3 ಸಿಕ್‍ಲೈನ್, 3 ಸ್ಟೇಬಲಿಂಗ್ ಲೈನ್‍ಗಳನ್ನೊಳಗೊಂಡಿದೆ. ಈ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. 2024ರ ಮೇ ಅಥವಾ ಜೂನ್ ಗೂ ಮೊದಲು ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನೈರುತ್ಯ ರೈಲ್ವೆಯ ಸಭೆಯಲ್ಲಿ ತಿಳಿಸಿರುತ್ತಾರೆ.


ಸಂಸದರು ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಾಡಿಯನ್ನು ಸಹ ಇಲ್ಲಿ ನಿರ್ವಹಣೆ ಮಾಡಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಕೋರಲಾಗಿ, ಜನರಲ್ ಮ್ಯಾನೇಜರ್ ರವರು ಈ ಬಗ್ಗೆ ಪೂರಕವಾಗಿ ಸ್ಪಂದಿಸಿ ನೂತನ ಯೋಜನಾ ವರದಿಯನ್ನು ಸಿದ್ದಪಡಿಸಿ ರೈಲ್ವೆ ಮಂಡಳಿಯಿಂದ ಮಂಜೂರಾತಿ ಪಡೆಯಲು ಕ್ರಮ ವಹಿಸುವುದಾಗಿ ತಿಳಿಸಿರುತ್ತಾರೆ.
ತಾಳಗುಪ್ಪ – ತಡಸ – ಹೊನ್ನಾವರ – ಶಿರಸಿ – ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗ ಯೋಜನೆಯ ಸರ್ವೆ ಕಾಮಗಾರಿಯು ಪೂರ್ಣಗೊಂಡಿದ್ದು, ನೈರುತ್ಯ ರೈಲ್ವೆಯು ಸರ್ವೆ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಿರುತ್ತದೆ. ಸಂಸದರು ಈ ಯೋಜನೆ ಮಂಜೂರು ಮಾಡಲು ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್‍ರವರನ್ನು ಈಗಾಗಲೇ ಕೋರಿದ್ದು ನೈರುತ್ಯ ರೈಲ್ವೆಯಿಂದಲು ಸಹ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಯಿತು.


ಅರಸಾಳು ಮತ್ತು ಹಾರನಹಳ್ಳಿಯಲ್ಲಿ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯನ್ನು ಮಾಡಲು ಸಂಸದರು ಒತ್ತಾಯಿಸಿದರು. ಈ ಕುರಿತಂತೆ ಅಗತ್ಯ ಕ್ರಮಕೈಗೊಳ್ಳುವುದಾಗಿ ನೈರುತ್ಯ ರೈಲ್ವೆಯವರು ತಿಳಿಸಿರುತ್ತಾರೆ.


ಸಂಸದರು ಬೆಂಗಳೂರು ಹಾಗು ಶಿವಮೊಗ್ಗ ನಗರಗಳ ನಡುವೆ ವಂದೇ ಭಾರತ ರೈಲು ಸೇವೆಯನ್ನು ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಕುರಿತಂತೆ ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿರುತ್ತಾರೆ.
ಶಿವಮೊಗ್ಗ – ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲ ಸಣ್ಣ ಪುಟ್ಟ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಈ ರೈಲುಗಳ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವಂತೆ ಮಾಡಲು ಸಂಸದರು ಮನವಿ ಮಾಡಿದರು. ನೈರುತ್ಯ ರೈಲ್ವೆಯು ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಧ್ಯವಿರುವಲ್ಲಿ ಶಿಫಾರಸು ಮಾಡುವಂತೆ ಸೂಕ್ತ ಬದಲಾವಣೆಗಳನ್ನು ಮಾಡುವ ನಿಟ್ಟಿನಲ್ಲಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿರುತ್ತಾರೆ ಎಂದು ಸಂಸದರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!