Hosanagara | ಪ್ರಾಣಭಯದಿಂದ ಬದುಕುತ್ತಿರುವ ಕುಟುಂಬ ; ಹಾಗಾದ್ರೆ ಏನಾಗ್ತಿದೆ ಅಲ್ಲಿ ?
ಹೊಸನಗರ: ತಾಲೂಕಿನಾದ್ಯಂತ ಕಲ್ಲು ಕ್ವಾರೆಗಳಿಂದ ಹಾಗೂ ನದಿ ಪಾತ್ರಗಳಿಂದ ಕಲ್ಲು ಹಾಗೂ ಮರಳಿನ ನಿರಂತರ ಭೂ ಒಡಲಿಂದ ಬಗೆಯುವ ಕಾರ್ಯ ಕಡಿವಾಣವಿಲ್ಲದೆ ನಿರಂತರವಾಗಿ ನಡೆಯುತ್ತಿದ್ದು ಸರ್ಕಾರ ಇದಕ್ಕೆ ಕೂಡಲೇ ಪರಿಹಾರ ಕಂಡುಹಿಡಿದು ಬಡಕೂಲಿ ಕಾರ್ಮಿಕರ ಹಾಗೂ ಅವರ ಕುಟುಂಬಸ್ಥರ ಬದುಕಿಗೆ ಆಸರೆ ಆಗಬೇಕಿದೆ.
ಹೌದು, ಮಂಗಳವಾರ ಮಧ್ಯಾಹ್ನ ಸರ್ವೆ ನಂಬರ್ 9ರಲ್ಲಿ ಗೇರುಪುರದಲ್ಲಿ ಕಲ್ಲುಕ್ವಾರೆಯಲ್ಲಿ ಬ್ಲಾಸ್ಟ್ ಮಾಡಿದ ಕಾರಣ ಚಾಲಕ ಆನಂದ ಎಂಬಾತನ ಮನೆಯ ಮೇಲೆ ಕಲ್ಲಿನ ಚೂರುಗಳು ಬಿದ್ದ ಪರಿಣಾಮ ಮನೆಯ ಮಹಡಿಗೆ ಹಾಕಿದ ಸಿಮೆಂಟ್ ಶೀಟ್ ಗಳಿಗೆ ಹಾನಿಯಾಗಿದ್ದು ಆತನ ಹೆಂಡತಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕಲ್ಲು ಕ್ವಾರೆ ಬ್ಲಾಸ್ಟ್ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸಮಯ ನಿಗದಿಪಡಿಸಿದ್ದರು ಇದರ ಗುತ್ತಿಗೆ ಪಡೆದ ಮಾಲೀಕರು ಅನಿಯಮಿತವಾಗಿ ಬ್ಲಾಸ್ಟ್ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು ಈ ಬ್ಲಾಸ್ಟ್ ಗಳಿಂದ ಸಿಡಿದ ಕಲ್ಲುಗಳ ಆಸುಪಾಸಿನ ಮನೆಗಳ ಮೇಲೆ ಬೀಳುತ್ತಿದ್ದು ಈ ಕುಟುಂಬಗಳ ಸದಸ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದಾರೆ. ಈ ಬಗ್ಗೆ ಚಾಲಕ ಆನಂದ ರಕ್ಷಣೆ ಕೋರಿ ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ತಿಳಿದು ಬಂದಿದೆ.
ಕಲ್ಲುಕ್ವಾರೆಯಲ್ಲಿ ಬ್ಲಾಸ್ಟ್ ಮಾಡಿದಾಗ ಸುಮಾರು 100 ರಿಂದ 150 ಮೀಟರ್ ವರೆಗೂ ಕಲ್ಲಿನ ಪೀಸುಗಳು ಹಾರಿ ಬರುತ್ತಿರುವ ಕಾರಣ ಕಲ್ಲು ಕ್ವಾರೆಯ ಆಸುಪಾಸಿನ ಜನರು ಪ್ರಾಣಭಯದಿಂದ ಬದುಕುತ್ತಿದ್ದಾರೆ.
ಕಲ್ಲುಕ್ವಾರೆಯ ಆಸುಪಾಸಿನ ಜನರಂತೆ ಹೊಸನಗರ ಪಟ್ಟಣದ ಹಳೆ ಸಾಗರ ರಸ್ತೆಯ ನಿವಾಸಿಗಳು ಅತಿ ವೇಗವಾಗಿ ಚಲಿಸುವ ಮರಳುಗಾಡಿ ಟಿಪ್ಪರ್ ಲಾರಿಗಳು ಯಮಸ್ವರೂಪಿ ವಾಹನಗಳ ಹಾಗೆ ಕಾಣುತ್ತಿದ್ದು ಈ ವಾಹನಗಳ ವೇಗಕ್ಕೆ ಕಡಿವಾಣ ಹಾಕುವಂತೆ ಅಲ್ಲಿನ ನಿವಾಸಿಗಳ ಆಗ್ರಹವಾಗಿದೆ