Ripponpet | ಕೆಡಿಪಿ ಸಭೆಯಲ್ಲಿ ಮುನ್ನಲೆಗೆ ಬಂದ ಹಲವು ಸಮಸ್ಯೆಗಳು‌

0 265

ರಿಪ್ಪನ್‌ಪೇಟೆ: ಕಳೆದ ಸಾಲಿನಲ್ಲಿ ವಿನಾಯಕ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಂಜೂರಾಗಿದ್ದ ಶೌಚಾಲಯವನ್ನು ಬೇರೆ ಶಾಲೆಗೆ ವರ್ಗಾಯಿಸಿ ನಮ್ಮ ಶಾಲೆಯ ಮಕ್ಕಳಿಗೆ ಸೌಲಭ್ಯ ದೊರೆಯದಂತಾಗಿದೆ.
ಅಲ್ಲದೆ ಶಾಲಾ ಅವರಣದಲ್ಲಿ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಕಟ್ಟಡ ಸಹ ಶಿಥಿಲಗೊಂಡಿದೆ ಹಾಗೂ ಶಾಲೆ ಬಿಟ್ಟ ಅಲೆಮಾರಿ ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕನೇ ಸ್ವಂತ ಹಳೆಯ ಕಾರೊಂದರಲ್ಲಿ ಮಕ್ಕಳನ್ನು ಕರೆತಂದು ಶಿಕ್ಷಣ ನೀಡುತ್ತಿದ್ದಾರೆ ಇವರ ಶಾಲೆಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟರೆ ಇನ್ನೂ ಹೆಚ್ಚಿನ ನಿಗರ್ತಿಕ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗುವುದೆಂಬ ಬೇಡಿಕೆಯನ್ನು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾರ್ದನಿಸಿತು.

ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ನೋಡಲ್ ಆಧಿಕಾರಿ ತಾಲ್ಲೂಕು ಪಂಚಾಯ್ತಿನ ಸಹಾಯಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಬಿಸಿಯೂಟ ಸೇರಿದಂತೆ ಮಕ್ಕಳಿಗೆ ಕುಡಿಯವ ಮತ್ತು ಶೌಚಾಲಯಕ್ಕೆ ನೀರಿನ ಕೊರತೆಯಿದ್ದು ತಕ್ಷಣ ಗಮನಹರಿಸುವುದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಸಭೆಯ ಗಮನಕ್ಕೆ ತರುವುದರೊಂದಿಗೆ ಸಾಕಷ್ಟು ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ ಅವುಗಳ ದುರಸ್ಥಿಗಾಗಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮಲೆನಾಡಿನಲ್ಲಿ ಈ ಬಾರಿಯಲ್ಲಿ ಮಳೆಯಿಲ್ಲದೆ ರೈತಾಪಿ ವರ್ಗ ನಾಟಿ ಮಾಡಿದಂತಹ ಭತ್ತಕ್ಕೆ ಬೆಂಕಿರೋಗ ಮತ್ತು ಇನ್ನಿತರ ರೋಗದ ಬಾಧೆ ಕಾಣಿಸಿಕೊಂಡಿದ್ದು ಇದಕ್ಕೆ ಕೃಷಿ ಇಲಾಖೆಯವರ ಮಾಹಿತಿಯನ್ನಾದರಿ ಔಷಧಿ ಸಿಂಪರಣೆ ಮಾಡುವ ಮೂಲಕ ಹತೋಟಿಗೆ ಬರುವುದೆಂದೆ ರೈತರಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಸಭೆಯಲ್ಲಿ ಪ್ರಸ್ತಾಪಿಸಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಯಿ ಕಡಿತಕ್ಕೆ ಮತ್ತು ಜ್ವರದಿಂದ ಬಳಲುತ್ತಿರುವವರಿಗೆ ಟಿ.ಟಿ ಇಂಜೆಕ್ಷನ್ ಮತ್ತು ನಾಯಿ ಕಡಿತದ ಇಂಜೆಕ್ಷನ್ ಸರಿಯಾಗಿ ಲಭ್ಯವಾಗುತ್ತಿಲ್ಲ ಹಾಗೂ ಆಸ್ಪತ್ರೆ ಆವರಣದ ಬಳಿ ದುರ್ನಾತ ಬೀರುತ್ತಿದ್ದು ಸ್ವಚ್ಚತೆಯಿಲ್ಲದಂತಾಗಿದೆ ಎಂದು ಹೇಳಿದಾಗ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆ ನಾವು ಅಸ್ಪತ್ರೆಯಲ್ಲಿ ಇರುವವರಲ್ಲ ಫೀಲ್ಡ್ ವರ್ಕರ್ ನವರು ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿ ಕೊನೆಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಕೆಡಿಪಿ ಸಭೆಯಲ್ಲಿ ಮಲೆನಾಡಿನ ವ್ಯಾಪ್ತಿಯ ಬರುವ ಹಲವು ಗ್ರಾಮಗಳಲ್ಲಿ ಹಲವರು ಗೌಠಾಣಾ ಅರಣ್ಯ ಜಾಗ ಮತ್ತು ಸೊಪ್ಪಿನಬೆಟ್ಟದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆಯನ್ನು ನಿರ್ಮಿಸಿಕೊಂಡಿದ್ದಾರೆ ಅವರಿಗೆ ಸರ್ಕಾರದ 94ಸಿ ಅಡಿ ಮಂಜೂರಾತಿ ಕೋರಿ ಅರ್ಜಿಯನ್ನು ಸಹ ಹಾಕಿಕೊಂಡಿದ್ದಾರೆ ಅವರಿಗೆ ತೊಂದರೆ ನೀಡದಂತೆ ಸಭೆಯ ಗಮನಕ್ಕೆ ಗ್ರಾಮ ಪಂಚಾಯ್ತಿ ಸದಸ್ಯ ಆಸಿಫ್‌ಭಾಷಾ ಪ್ರಸ್ತಾಪಿಸಿದರು.

ನಾಡಕಛೇರಿಯ ಆವರಣದಲ್ಲಿ ಸಾರ್ವಜನಿಕ ಶೌಚಾಲಯವಿದೆ ಆದನ್ನು ಸ್ವಚ್ಚಗೊಳಿಸಲು ಪಂಚಾಯ್ತಿಯಿಂದ ವ್ಯವಸ್ಥೆ ಮಾಡಿಕೊಡಿ ಎಂದು ಗ್ರಾಮ ಲೆಕ್ಕಾಧಿಕಾರಿ ಕಂದಾಯ ಇಲಾಖೆಯ ಪರವಾಗಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಾಗ ಗ್ರಾಮ ಪಂಚಾಯ್ತಿ ಸದಸ್ಯೆ ಮಂಜುಳಾ ಮತ್ತು ಆಸಿಫ್, ಗಣಪತಿ, ಮಲ್ಲಿಕಾರ್ಜುನ ಮಾತನಾಡಿ, ತಾವು ಕಛೇರಿಯ ವೇಳೆಯಲ್ಲಿ ಮಾತ್ರ ಸಾರ್ವಜನಿಕರಿಗೆ ಆವಕಾಶ ಕಲ್ಪಿಸಿ ನಂತರ ಅದನ್ನು ಬಂದ್ ಮಾಡುವುದರೊಂದಿಗೆ ಗೇಟ್‌ಗೆ ಬೀಗ ಹಾಕುವಂತೆ ಸಲಹೆ ನೀಡಿ ಶೌಚಾಲಯದ ಸ್ವಚ್ಚತೆ ಸಹ ನಿಮಗೆ ಸೇರಿದು ಎಂದು ಹೇಳಿದರು.

ಈ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷ್ಮಿ, ಪಿ.ರಮೆಶ್, ಆಸಿಫ್‌ಭಾಷಾ, ವನಮಾಲ, ನಿರೂಪ್, ಎನ್.ಚಂದ್ರೇಶ್, ಮಂಜುಳಾ ಕೇತಾರ್ಜಿರಾವ್, ವೇದಾವತಿ, ಅಶ್ವಿನಿ ರವಿಶಂಕರ್, ಜಿ.ಡಿ.ಮಲ್ಲಿಕಾರ್ಜುನ, ಮಹಾಲಕ್ಷ್ಮಿ, ಪ್ರಕಾಶ್‌ಪಾಲೇಕರ್, ಸುಂದರೇಶ್, ಪಿಡಿಓ ಮಧುಸೂದನ್, ಕಾರ್ಯದರ್ಶಿ ಮಧುಶ್ರೀ, ಅಂಗನವಾಡಿ ಮತ್ತು ಆರೋಗ್ಯ ಅರಣ್ಯ ಶಿಕ್ಷಣ ಕೃಷಿ ತೋಟಗಾರಿಕಾ ಇಲಾಖೆಯ ಅಧಿಕಾರಿವರ್ಗ ಹಾಜರಿದ್ದರು.

Leave A Reply

Your email address will not be published.

error: Content is protected !!