Ripponpet | ವಿಜೃಂಭಣೆಯಿಂದ ನೆರವೇರಿದ ‘ಗಣಪನ’ ಜಲಸ್ತಂಭನ

0 302

ರಿಪ್ಪನ್‌ಪೇಟೆ : ಪಟ್ಟಣದ ಭೂಪಾಳಂ ಆರ್ ಚಂದ್ರಶೇಖರಯ್ಯ ಸಭಾ ಮಂಟಪದಲ್ಲಿ ಪ್ರತಿಷ್ಠಾಪಿಸಿದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ (ಹಿಂದೂ ಮಹಾಸಭಾ ಅಂಗಸಂಸ್ಥೆ) ಗಣಪತಿ ವಿಸರ್ಜನೆ ಶುಕ್ರವಾರ ಜನಸಾಗರದ ನಡುವೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ತಿಲಕ್ ಮಹಾ ಮಂಟಪದಿಂದ ಗುರುವಾರ ಸಂಜೆ 5:30ಕ್ಕೆ ಹೊರಟ ವಿಸರ್ಜನಾ ಮೆರವಣಿಗೆ ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಾದ ಶಿವಮೊಗ್ಗ, ತೀರ್ಥಹಳ್ಳಿ ಸಾಗರ ರಸ್ತೆಗಳಲ್ಲಿ ಸಾಗಿ ನಂತರ ಹೊಸನಗರ ರಸ್ತೆಯ ಗವಟೂರು ಸಮೀಪದ ತಾವರಕೆರೆಯಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಜಲ ಸ್ತಂಭನಗೊಂಡಿತು.

ರಾಜಬೀದಿ ಉತ್ಸವದ ಆರಂಭದಲ್ಲಿ ಭದ್ರಾವತಿಯ ಅರಕೆರೆಯ ವೀರಗಾಸೆ, ಶಿಗ್ಗಾಂವ್‌ನ ಜಾಂಜಾ ಪಥಾಕ್, ಗೊಂಬೆ ಕುಣಿತ, ನಗಾರಿ ಹಾಗೂ ಹುಲಿ ವೇಷ, ತಟ್ಟಿರಾಯ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳ ವಿಶೇಷ ಪ್ರದರ್ಶನ ಜನಾಕರ್ಷಣೆಯ ಕೇಂದ್ರವಾಗಿತ್ತು. ಮೆರವಣಿಗೆ ಮಧ್ಯಂತರದಲ್ಲಿ ಆಗಮಿಸಿದ ಎರಡು ಡಿ.ಜೆ ತಂಡದ ಅಬ್ಬರಕ್ಕೆ ಮಾರುಹೋದ ಯುವ ಸಮೂಹ ಡಿಜೆ ತಾಳಕ್ಕೆ ತಕ್ಕಂತೆ ಇಡೀ ರಾತ್ರಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ ಜಾನಪದ ಕಲಾಪ್ರಕಾರಗಳ ತಂಡದ ಪ್ರದರ್ಶನ ಕಲಾಸಕ್ತರ ಕೊರತೆಯಿಂದ ಗೌಣವಾಯಿತು.


ನಾಡಿನ ಜಾನಪದ ಕಲಾ ಸಂಸ್ಕೃತಿ ಹಾಗೂ ಹಿಂದೂ ಪರಂಪರೆಯ ಸಂಘಟನೆಗಾಗಿ ಮಹಾಚಿಂತಕ ಭೂಪಾಳಂ ಆರ್ ಚಂದ್ರಶೇಖರಯ್ಯ ಐದು ದಶಕದ ಹಿಂದೆ ಹುಟ್ಟು ಹಾಕಿದ ದೂರದೃಷ್ಟಿತ್ವ ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂದು ಹಿರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಂತಿ ಸಮಿತಿಯಲ್ಲಿ ರಕ್ಷಣಾ ಇಲಾಖೆ ಡಿಜೆ ಹಾಗೂ ಬೈಕ್ ರ‍್ಯಾಲಿಗಳನ್ನು ನಿಷೇಧಿಸುವುದಾಗಿ ಹೇಳಿಕೆ ನೀಡಿತ್ತು. ನಂತರ ಅದಕ್ಕೆ ಅವಕಾಶ ಕಲ್ಪಿಸಿರುವುದು ಎಷ್ಟು ಸಮಂಜಸ. ಯಾವುದೇ ಸಂಘಟನೆಗಳಾಗಲಿ ಸಮಾಜದ ಹಿತ ಕಾಯುವ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಸಂಘಟನೆಗಳು ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸುವುದು ಒಳಿತು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು.
– ಟಿ.ಆರ್.ಕೃಷ್ಣಪ್ಪ, ಸಾಮಾಜಿಕ ಹೋರಾಟಗಾರ

ವಿನಾಯಕ ವೃತ್ತದಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಜಗದೀಶ್ ಶೆಟ್ಟರ್ ಆಪ್ತ ಸಹಾಯಕ ಜಗನ್ನಾಥ್ ಬಂಗೇರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.
ಮೆರವಣಿಗೆ ಮಧ್ಯೆ ಮಧ್ಯೆ ವರುಣನ ತುಂತುರು ಸಿಂಚನ ಹಿತಾನುಭವ ನೀಡಿತ್ತು.

ಶಾಂತಿಯುತವಾಗಿ ಗಣಪನ ವಿಸರ್ಜನೆಗೆ ಸಹಕರಿಸಿದ ಸಮಸ್ತ ನಾಡಿನ ಜನತೆಗೆ, ಕಲಾ ತಂಡಗಳಿಗೆ, ರಕ್ಷಣಾ, ಮೆಸ್ಕಾಂ, ಕಂದಾಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್, ಗೌರವಾಧ್ಯಕ್ಷ ವೈ.ಜೆ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ಸೇರಿದಂತೆ ಸಮಿತಿಯ ವಿವಿಧ ವಲಯದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸಾಗರ ಉಪವಿಭಾಗಾಧಿಕಾರಿಗಳು ಮತ್ತು ಹೊಸನಗರ ತಹಶೀಲ್ದಾರ್, ತೀರ್ಥಹಳ್ಳಿ ಡಿ.ವೈ.ಎಸ್.ಪಿ, ಹೊಸನಗರ ವೃತ್ತ ನಿರೀಕ್ಷಕರು, ನಾಡಕಛೇರಿ ಉಪತಹಶೀಲ್ದಾರ್, ಪಿಎಸ್.ಐ, ಸಿಬ್ಬಂದಿ ವರ್ಗ ಸೇರಿದಂತೆ ಅಗ್ನಿಶಾಮಕದಳ ಗೃಹರಕ್ಷಕ ಅಧಿಕಾರಿ ವರ್ಗ ಅವರಿಗೆ ಅಭಿನಂದನೆ ಸಲ್ಲಿಸಿದೆ.

Leave A Reply

Your email address will not be published.

error: Content is protected !!