Shivamogga | ಅ.15 ರಿಂದ 24ರ ವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ವೈಭವದಿಂದ ಆಚರಣೆ

0 109

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಅ.15ರಿಂದ 24ರ ವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2023ರನ್ನು ವೈಭವದಿಂದ ಆಚರಿಸಲಿದೆ ಎಂದು ಮೇಯರ್ ಎಸ್.ಶಿವಕುಮಾರ್ ತಿಳಿಸಿದರು.

ಅವರು ಇಂದು ಪಾಲಿಕೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ.15ರ ಬೆಳಿಗ್ಗೆ 11 ಗಂಟೆಗೆ ಕೋಟೆ ರಸ್ತೆಯ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾತಿ ವೈಜಯಂತಿ ಕಾಶಿ ಅವರು ದಸರಾ ಉದ್ಘಾಟಿಸಲಿದ್ದಾರೆ. ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ, ಸಚಿವ ಡಿ. ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದಾ ಪರ‍್ಯಾ ನಾಯ್ಕ, ಎಸ್. ರುದ್ರೇಗೌಡ, ಎಸ್.ಎಲ್. ಬೋಜೇಗೌಡ, ಭಾರತೀಶೆಟ್ಟಿ, ಡಿ.ಎಸ್. ಅರುಣ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ವಿಪಕ್ಷ ನಾಯಕಿ ಮೆಹಕ್ ಷರೀಫ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು.

ಅ.24ರ ಮಧ್ಯಾಹ್ನ 2-30ಕ್ಕೆ ಶಿವಪ್ಪನಾಯಕ ಅರಮನೆ ಆವರಣದಿಂದ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೇಯರ್ ಎಸ್. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಈ ಮೆರವಣಿಗೆಯಲ್ಲಿ ದೇವಾನುದೇವತೆಗಳ ಉತ್ಸವ ಮೂರ್ತಿಗಳು ಸಾಗಲಿವೆ ಎಂದರು.

ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಆಯಕ್ತ ಕೆ. ಮಾಯಣ್ಣ ಗೌಡ ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಲಿದ್ದಾರೆ. ಅಲಂಕೃತ ಚಾಮುಂಡಿ ದೇವಿಯ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರುವ ಆನೆಗಳಾದ ಸಾಗರ್, ನೇತ್ರಾವತಿ, ಹೇಮಾವತಿ ಇವರೊಂದಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಮಂಗಳ ವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಫ್ರೀಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಸಂಜೆ 6-30ಕ್ಕೆ ತಹಶೀಲ್ದಾರ್ ಆರ್. ಪ್ರದೀಪ್ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬನ್ನಿ ಮುಡಿದ ನಂತರ ಆಕರ್ಷಕ ಪಟಾಕಿ ಸಿಡಿಮದ್ದು ರಾವಣದಹನ ನಡೆಯಲಿದೆ ಎಂದರು.

ಪಾಲಿಕೆ ಸದಸ್ಯರೂ ಆದ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ವೈಭವದ ದಸರಾಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ದಸರಾ, ಯೋಗದಸರಾ, ಆಹಾರ ದಸರಾ, ರಂಗದಸರಾ, ಚಲನಚಿತ್ರ ದಸರಾ, ರೈತ ದಸರಾ, ಪರಿಸರ ದಸರಾ, ಮಹಿಳಾ ದಸರಾ, ಕಲಾದಸರಾ ಇದ್ದು, ಈ ಬಾರಿ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾವನ್ನು ಅ.20ರಂದು ಹಮ್ಮಿಕೊಳ್ಳಲಾಗಿದೆ ಎಂದರು.

ಕಳೆದ ವರ್ಷ ಸರ್ಕಾರದ ಒಂದು ಕೋಟಿ ಅನುದಾನ ಸೇರಿದಂತ 2.63 ಕೋಟಿ ರೂ. ವೆಚ್ಚದಲ್ಲಿ ವೈಭವದ ದಸರಾ ಆಚರಿಸಲಾಗಿತ್ತು. ಈ ಬಾರಿ ಸರ್ಕಾರಕ್ಕೆ 1.50ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೂ ಇಂತಿಷ್ಟು ಹಣ ಎಂದು ಬಂದಿಲ್ಲ. ಆದರೆ ಪಾಲಿಕೆಯಿಂದಲೇ 2 ಕೋಟಿ ರೂ. ವೆಚ್ಚದಲ್ಲಿ ಯಾವುದೇ ಕೊರತೆಯಾಗದಂತೆ ವೈಭವದಿಂದ ಆಚರಿಸಲಾಗುವುದು. ಸರ್ಕಾರದಿಂದ ಹೆಚ್ಚಿನ ಅನುದಾನ ಬಂದಲ್ಲಿ ಇನ್ನೂ ಹೆಚ್ಚಿನ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.

 ಅ.20ರಂದು ಅಂಬಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಆನೆಗಳ ತಂಡಕ್ಕೆ ಸ್ವಾಗತಿಸಲಾಗುವುದು. ನಂತರ ಮೂರು ದಿನಗಳ ಕಾಲ ಆನೆಗಳ ತಾಲೀಮು ನಡೆಯಲಿದೆ. ಬೆಳ್ಳಿಯ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪ್ರತಿ ವರ್ಷ ಒಂದೊಂದು ರೀತಿಯ ಆಭರಣಗಳನ್ನು ತೊಡಿಸಲಾಗುತ್ತಿದ್ದು, ಈ ಬಾರಿ ಸೊಂಟದ ಪಟ್ಟಿ ಹಾಕಲಾಗುವುದು ಎಂದರು.

ವಿವಿಧ ದಸರಾಗಳನ್ನು ಚಲನಚಿತ್ರ ನಟರು, ಹಾಗೂ ಗಣ್ಯರು ಉದ್ಘಾಟಿಸಲಿದ್ದು, ಕುವೆಂಪು ರಂಗಮAದಿರ, ಅಂಬೇಡ್ಕರ್ ಭವನ, ನೆಹರು ಕ್ರೀಡಾಂಗಣ, ಫ್ರೀಡಂ ಪಾರ್ಕ್, ಶಿವಪ್ಪ ನಾಯಕ ಅರಮನೆ, ಸುರ್ವಣ ಸಂಸ್ಕೃತಿ ಭವನದಲ್ಲಿ ವಿವಿಧ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಲಕ್ಷ್ಮೀ ಶಂಕರ ನಾಯಕ್, ಆಡಳಿತ ಪಕ್ಷದ ನಾಯಕ್ ಎಸ್. ಜ್ಞಾನೇಶ್ವರ್, ಸದಸ್ಯರಾದ ರೇಖಾ ರಂಗನಾಥ್, ಯಮುನಾ ರಂಗೇಗೌಡ, ಅನಿತಾ ರವಿಶಂಕರ್, ಮಂಜುಳಾಶಿವಣ್ಣ, ಇ. ವಿಶ್ವಾಸ್, ಸುನೀತಾ ಅಣ್ಣಪ್ಪ, ಸುರೇಖಾ ಮುರಳೀಧರ್, ಯು.ಹೆಚ್. ವಿಶ್ವನಾಥ್, ಪ್ರಭಾಕರ್, ಸುವರ್ಣಾ ಎನ್. ಶಂಕರ್, ಧೀರರಾಜ್‌ಹೊನ್ನವಿಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Leave A Reply

Your email address will not be published.

error: Content is protected !!