Shivamogga | ಗೌರಿ-ಗಣೇಶ ಹಬ್ಬ ಇನ್ನೆರಡು ದಿನ ಇರುವಾಗಲೇ ಸಾಮಾಗ್ರಿಗಳ ಖರೀದಿ ಜೋರು | ಎಲ್ಲೆಲ್ಲೂ ಜನಜಂಗುಳಿ | ಮಾರುಕಟ್ಟೆಗೆ ಬಂದ ಗಣಪ

0 30

ಶಿವಮೊಗ್ಗ : ಗೌರಿ-ಗಣೇಶನ ಹಬ್ಬಕ್ಕೆ ಇನ್ನೆರಡು ದಿನ ಇರುವಂತೆಯೇ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ಸಾಗಿದೆ. ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ಜನಜಂಗುಳಿ ಕಂಡು ಬಂದರೆ, ಈಗಾಗಲೇ ಅತ್ಯಾಕರ್ಷಕ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಶಿವಮೊಗ್ಗ ಸೇರಿದ ಜಿಲ್ಲೆಯಾದ್ಯಂತ ಹಬ್ಬದ ಸಡಗರ ಸಂಭ್ರಮದ ವಾತಾವರಣ ಕಂಡುಬಂದಿದೆ. ಈಗಾಗಲೇ ಗಣಪತಿಯನ್ನು ಪ್ರತಿಷ್ಠಾಪಲು ಪೆಂಡಾಲ್ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಮಾರುಕಟ್ಟೆಯಲ್ಲಿ ಹೊಸ ಬಟ್ಟೆ ಖರೀದಿ, ಹಬ್ಬಕ್ಕೆ ಬೇಕಾದ ಸಾಮಗ್ರಿ ಹಾಗೂ ಹೂವು, ಹಣ್ಣು ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ.

ಹೂವು ಹಣ್ಣು ಅಲ್ಪ ದುಬಾರಿ : 

ಹಬ್ಬಗಳು ಬಂದರೆ ಹೂವು ಹಣ್ಣುಗಳ ದರ ದುಪ್ಪಟ್ಟು ಆಗುತ್ತದೆ. ಆದರೆ ಈ ಬಾರಿ ದರ ವಿಪರೀತ ಏರಿಕೆಯಾಗಿರಲಿಲ್ಲ. ಆದರೂ ಕೂಡ ಮಲ್ಲಿಗೆ, ಕಾಕಡ, ಸೇವಂತಿಗೆ, ಕನಕಾಂಬರ ಸೇರಿದಂತೆ ಹೂಗಳ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಹಾಗೆಯೇ ಹಣ್ಣುಗಳ ಬೆಲೆಯಲ್ಲೂ ತುಸು ಏರಿಕೆ ಕಂಡಿದೆ.

ಬಾಳೆಹಣ್ಣು ಕೆಜಿ ಒಂದಕ್ಕೆ 80 ರಿಂದ 100 ರೂ. ಇದ್ದರೆ. ಸೇಬು, ದಾಳಿಂಬೆ 150ರಿಂದ 200 ರೂ., ಮೂಸಂಬಿ, ಸೀತಾಫಲ 60 ರೂ., ಪೇರಲೆ 100ರೂ, ಕಿತ್ತಳೆ 100 ರೂ, ಇದೆ. ಕಾಕಡ, ಮಲ್ಲಿಗೆ, ಚೆಂಡು ಹೂವು, ಸೇವಂತಿ ಸಹಿತ ಹೂವು ಮಾರೊಂದಕ್ಕೆ 50 ರಿಂದ 80 ರೂ.ಗೆ ಮಾರಾಟವಾಗುತ್ತಿದ್ದವು. ಗರಿಕೆ ಜೋಡಿ ಕಟ್ಟಿಗೆ 20 ರೂ, ಬಾಳೆಕಂದು ಜೋಡಿಗೆ  20ರಿಂದ  40 ರೂ, ತುಳಸಿ ಮಾಲೆಗೆ 60 ರೂ. ದರ ಇತ್ತು.

ಹಬ್ಬದ ಹಿನ್ನೆಲೆಯಲ್ಲಿ ದಿನಸಿ ಸಾಮಗ್ರಿ ಹೊಸ ಬಟ್ಟೆ ಖರೀದಿಗೆಂದು ಜನರು ಮಾರುಕಟ್ಟೆಗೆ ಆಗಮಿಸುತ್ತಿದ್ದು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಸಾಗಿದೆ. ಶಿವಮೊಗ್ಗದ ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಬಿಹೆಚ್ ರಸ್ತೆ, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಲಕ್ಷ್ಮಿ ಟಾಕೀಸ್ ವೃತ್ತ, ಪೊಲೀಸ್ ವೃತ್ತ ಹೇಗೆ ಪ್ರಮುಖ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗಿದೆ. 

ಹಬ್ಬಕ್ಕೆ ಮುಂಚಿತವಾಗಿ ಗ್ರಾಹಕರು ಅಂಗಡಿಗಳಿಗೆ ತೆರಳಿ ಕುಟುಂಬದ ಸದಸ್ಯರಿಗೆ ಹೊಸಬಟ್ಟೆ ಖರೀದಿ, ಹೆಣ್ಣುಮಕ್ಕಳಿಗೆ ಬಾಗಿನ ನೀಡಲು ಮೊರ, ತೆಂಗಿನಕಾಯಿ ಮೊದಲಾದ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿರುವ ದೃಶ ನಗರದ ಮಾರುಕಟ್ಟೆಯಲ್ಲಿ ಕಂಡು ಬಂತು.

ಮಾರುಕಟ್ಟೆಗೆ ಬಂದ ಗಣಪ :

ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ತಮಗೆ ಬೇಕಾದ ಆಕೃತಿಯ ಗಣೇಶನ ವಿಗ್ರಹವನ್ನು ಮೊದಲೇ ಆರ್ಡರ್‌ ನೀಡಿ ಮಾಡಿಸಿಕೊಳ್ಳುತ್ತಾರೆ. ಮನೆಗಳಲ್ಲಿ ಇಡುವ ಸಣ್ಣ ಗಣೇಶನ ವಿಗ್ರಹಗಳನ್ನು ಮಾರುಕಟ್ಟೆಯಿಂದ ಖರೀದಿಸುವವರೇ ಹೆಚ್ಚು. ಹಾಗಾಗಿ ಎರಡು ಮೂರು ದಿನಗಳಿಂದ ಗಣೇಶನ ವಿಗ್ರಹಗಳ ಖರೀದಿ ನಡೆಯುತ್ತಿದೆ. ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿಯೇ ವಿಗ್ರಹ ಮಾರಾಟ ನಡೆದವು.

ಅರ್ಧ ಅಡಿಯಿಂದ ಹಿಡಿದು ಐದಾರು ಅಡಿಗಳವರೆಗೆ ಬಗೆ ಬಗೆಯ ಗಣೇಶ ಮೂರ್ತಿಗಳು ಮಾರಾಟಕ್ಕೆ ಇಡಲಾಗಿತ್ತು. ಪರಿಸರ ಸ್ನೇಹಿ ಗಣೇಶ, ಮಣ್ಣಿನ ಗಣೇಶ ವಿಗ್ರಹ ಮಾರಾಟ ಮಾಡಲಾಗುತ್ತಿತ್ತು. 200 ರೂ. ನಿಂದ ಹಿಡಿದು ಸಾವಿರಾರು ರೂಪಾಯಿ ವರೆಗಿನ ವಿವಿಧ ವಿನ್ಯಾಸದ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.

ಪ್ರಯಾಣಿಕರ ದಟ್ಟಣೆ :

ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ನೆಲೆಸಿರುವವರು ತಮ್ಮ ಸ್ವಂತ ಊರುಗಳಿಗೆ ಆಗಮಿಸುತ್ತಿರುವುದರಿಂದ ರೈಲುಗಳಲ್ಲಿ ಹಾಗೂ ಬಸ್ಸುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬಂದಿದೆ. ಈಗಾಗಲೇ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಸುಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೂಡ ನಡೆದಿದೆ. ಪ್ರಯಾಣಿಕರ ದಟ್ಟಣೆ ಇರುವುದರಿಂದ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ಸೇವೆಯನ್ನು ಕಲ್ಪಿಸಿದೆ.

ಗಣೇಶ ಮೂರ್ತಿಯನ್ನು ಮನೆ, ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಉತ್ಸವ, ಸಡಗರ, ಸಂಭ್ರಮದಿಂದ ಆಚರಿಸಲು ತಯಾರಿ ನಡೆಯುತ್ತಿದ್ದರೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಜತೆಗೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲೆಡೆ ಕೂಡ ಕಟ್ಟೆಚ್ಚರ ವಹಿಸಿದೆ.

Leave A Reply

Your email address will not be published.

error: Content is protected !!