Shivamogga | ಜಿಲ್ಲೆಯಲ್ಲಿ ಪಾರದರ್ಶಕ ಮತದಾನ ನಡೆಯಲು ಸಿದ್ಧತೆ ; ಡಿಸಿ

0 29

ಶಿವಮೊಗ್ಗ : ಜಿಲ್ಲೆಯಲ್ಲಿ ಪಾರದರ್ಶಕವಾಗಿ‌ ಮತದಾನ ನಡೆಯಲು ಸಿದ್ಧತೆ ಕೈಗೊಳ್ಳಲಾಗಿದೆ. ಒಂದು ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆದ ಡಾ. ಸೆಲ್ವಮಣಿ ತಿಳಿಸಿದರು.


ನಗರದ ಪತ್ರಿಕಾ ಭವನದಲ್ಲಿ ಟ್ರಸ್ಟ್‌ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗಾಗಲೇ ಮಾದರಿ ನೀತಿಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಕಟ್ಟುನಿಟಿನ ಕ್ರಮ ಜರುಗಿಸಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಿದೆ. ಮಾದರಿ ನೀತಿ ಸಂಹಿತೆ ಪ್ರತಿಯೊಬ್ಬರಿಗೂ ಅನ್ವಯ ಆಗಲಿದ್ದು, ಯಾರೂ ಕೂಡ ಉಲ್ಲಂಘನೆ ಮಾಡಬಾರದು ಎಂದರು.


ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 40 ಲಕ್ಷ ರೂ.ವರೆಗೂ ಖರ್ಚು ಮಾಡುವುದಕ್ಕೆ ಅವಕಾಶವಿದೆ. ಖರ್ಚು ವೆಚ್ಚದ ಸಂಪೂರ್ಣ ಮಾಹಿತಿ‌ ನೀಡಬೇಕು. ಇದಕ್ಕಾಗಿ ವೀಕ್ಷಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಖರ್ಚು ಮಾಡುವುದು ಕಂಡುಬಂದರೆ ಚುನಾವಣಾ‌ ಆಯೋಗದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧಡೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಹಲವೆಡೆ ಸಮರ್ಪಕ ದಾಖಲಾತಿ ಇಲ್ಲದ ನಗದು ಹಾಗೂ ವಿವಿಧ ವಸ್ತುಗಳು, ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಯಾವುದೇ ರೀತಿಯಲ್ಲಿ ಆಮಿಷ ಒಡ್ಡಬಾರದು. ಧಾರ್ಮಿಕ ಸ್ಥಳಗಳಲ್ಲೂ ರಾಜಕೀಯ ಚಟುವಟಿಕೆ ಮಾಡುವಂತಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು
ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಮಾತನಾಡಿ, ವಿಧಾನಸಭಾ ಚುನಾವಣೆ ನೀತಿ ಸಂಹಿತೆ‌ ಜಾರಿಯಾದ ದಿನದಿಂದ ಈವರೆಗೂ ಸುಮಾರು 1300ಕ್ಕೂ ಹೆಚ್ಚು ಕೇಸುಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿನ 1200 ರೌಡಿ ಶೀಟರ್ ಗಳನ್ನು ಅವರನ್ನು ಹದ್ದು ಬಸ್ತಿನಲ್ಲಿಡಲಾಗಿದೆ. ಹಾಗೂ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದರು.


ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಒಟ್ಟು 61 ಮಂದಿಯನ್ನು ಗಡಿಪಾರು ಮಾಡುವಂತೆ‌ ಶಿಫಾರಸು ಮಾಡಲಾಗಿದ್ದು ಅದರಲ್ಲಿ 51 ಮಂದಿ ಗಡಿಪಾರು ಆಗಿದೆ. ರಾಜ್ಯದಲ್ಲಿ ಅತಿ‌ ಹೆಚ್ಚು ಗಡಿಪಾರು ಮಾಡಲಾದಂತಹ ಜಿಲ್ಲೆಗಳಲ್ಲಿ ಶಿವಮೊಗ್ಗ ಮೊದಲ‌ ಸ್ಥಾನದಲ್ಲಿದೆ. ಅಲ್ಲದೆ ಆರು ಜನರ ಮೇಲೆ
ಗೂಂಡಾ ಕಾಯ್ದೆಯಡಿ ಕ್ರಮ ಜರುಗಿ‌ಸಲಾಗಿದೆ ಎಂದರು.


ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ವಿವಿಧೆಡೆ 36 ಚೆಕ್ ಪೋಸ್ಟ್‌ಗಳನ್ನು ಹಾಕಲಾಗಿದೆ. ನಗದು, ಮದ್ಯ ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ‌ ಚುನಾವಣೆ ಸಂದರ್ಭದಲ್ಲಿ ಸುಮಾರು 4.69 ಕೋಟಿ ರೂ. ನಗದು ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಬಾರಿ ಈಗಾಗಲೇ 17 ಕೋಟಿ ರೂ. ನಷ್ಟು ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಚೆಕ್ ಪೋಸ್ಟ್ ಸೇರಿದಂತೆ ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.


ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಎಸ್. ಲೋಖಂಡೆ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ನೂರರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ. ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಶೇಕಡವಾರು ಮತದಾನ‌ ಇನ್ನಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.


ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ, ನಾಗರಾಜ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!