Shivamogga | ಟಿಪ್ಪು ಜಯಂತಿ ಆಗಿದೆ ಮುಂದೆ ಔರಂಗಜೇಬನ ಜಯಂತಿಯೂ ಆಗಬಹುದು ; ಕಟೀಲ್
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ಹಾಗೂ ಹಲ್ಲೆಯ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.
ಅವರು ಇಂದು ರಾಗಿಗುಡ್ಡದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಗೆ ಸಾಂತ್ವನ ನೀಡಿ ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಗಿಗುಡ್ಡದ ಘಟನೆ ಸಂಪೂರ್ಣ ಪೂರ್ವನಿಯೋಜಿತವಾಗಿದೆ. ಹಿಂದೂಗಳ ಮನೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಸುಮಾರು 2 ಗಂಟೆಗಳ ಕಾಲ ಹಿಂದೂಗಳ ಮನೆ ಮೇಲೆ ಕಲ್ಲು ತೂರಲಾಗಿದೆ. ಮಹಿಳೆಯರ ಮೇಲೂ ಹಲ್ಲೆ ಮಾಡಲಾಗಿದೆ. ಇದನ್ನು ತಪ್ಪಿಸಲು ಬಂದ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ.ಇದೊಂದು ಪೂರ್ವ ನಿಯೋಜಿತ ಘಟನೆ ಎಂದು ಅಲ್ಲಿನ ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಹಾಗೂ ನಾವು ಕಣ್ಣಾರೆ ನೋಡಿರುವುದರಿಂದ ತಿಳಿಯುತ್ತದೆ ಎಂದರು.

ಈದ್‌ಮಿಲಾದ್ ಪೂರ್ವದಲ್ಲಿ ನಗರದಲ್ಲಿ ಗಣೇಶನ ಹಬ್ಬದ ಮೆರವಣಿಗೆ ನಡೆದಿತ್ತು. ಅದು ಸಂಪೂರ್ಣ ಶಾಂತಿಯುತವಾಗಿತ್ತು. ರಾಗಿಗುಡ್ಡದಲ್ಲಿಯೂ ಕೂಡ ಕೂಡ ಗಣಪತಿಗಳನ್ನು ಬಿಡಲಾಗಿತ್ತು. ಆಗಲೂ ಗಲಾಟೆ ಇರಲಿಲ್ಲ. ಆದರೆ ಈದ್ ಮಿಲಾದ್ ಅಂಗವಾಗಿ ನಗರದ ತುಂಬೆಲ್ಲಾ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಬಂಧವೇ ಇಲ್ಲದ ಕಟೌಟ್‌ಗಳನ್ನು ನಿಲ್ಲಿಸಲಾಗಿತ್ತು. ಕತ್ತಿ ಗುರಾಣಿಗಳನ್ನು ಬಳಸಲಾಗಿತ್ತು. ಮತ್ತು ಝಳಪಿಸಲಾಗಿತ್ತು. ಹಿಂದೂ ವಿರೋಧಿ ದೊರೆಗಳಾದ ಔರಂಗಜೇಬ ಮತ್ತು ಟಿಪ್ಪುಸುಲ್ತಾನನ ಕಟೌಟ್‌ಗಳನ್ನು ದೊಡ್ಡದಾಗಿ ಪ್ರದರ್ಶನ ಮಾಡಲಾಗಿತ್ತು. ಇದರ ಜೊತೆಗೆ ಅಖಂಡ ಭಾರತದ ಚಿತ್ರವನ್ನು ಔರಂಗಜೇಬನ ಸಾಮ್ರಾಜ್ಯ ಎಂದು ಬಿಂಬಿಸಲಾಗಿತ್ತು. ಜೊತೆಗೆ ಪಾಕಿಸ್ತಾನವನ್ನು ಸೇರಿಸಲಾಗಿತ್ತು. ಈ ಎಲ್ಲವೂ ಹಿಂದೂಗಳ ಭಾವನೆ ಕೆರಳಿಸಲೆಂದೇ ಮಾಡಲಾಗಿತ್ತು ಎಂದರು.
ಈ ಎಲ್ಲ ಘಟನೆಗಳ ಹಿಂದೆ ಪೊಲೀಸರ ವೈಫಲ್ಯವಿದೆ. ಸರ್ಕಾರದ ಸಹಕಾರವಿದೆ. ಭಯ ಹುಟ್ಟಿಸುವ ಕತ್ತಿಗಳನ್ನು ಪೊಲೀಸರು ತೆರವುಗೊಳಿಸಬೇಕಿತ್ತು. ಅದೇಕೆ ತೆರವುಗೊಳಿಸಲಿಲ್ಲವೋ ಗೊತ್ತಿಲ್ಲ. ಈ ಗಲಭೆಯಲ್ಲಿ ಮುಸ್ಲಿಂ ಮಹಿಳೆಯರು ಕೂಡ ಮುಂದೆ ನಿಂತು ಪ್ರೇರಣೆ ನೀಡಿದ್ದಾರೆ. ಇಡೀ ಘಟನೆ ಹಿಂದೂ ವಿರೋಧಿಯೇ ಆಗಿತ್ತು ಎಂದರು.
ಸರ್ಕಾರ ಮತ್ತೆ ಮತ್ತೆ ತಾನು ಮುಸ್ಲಿಂ ಪರ, ಹಿಂದೂ ವಿರೋಧಿ, ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವವರು ಎಂದು ಸಾಬೀತುಪಡಿಸುತ್ತಾ ಹೋಗಿದೆ. ಇಂದು ಟಿಪ್ಪು ಜಯಂತಿ ಆಗಿದೆ. ಮುಂದೆ ಔರಂಗಜೇಬನ ಜಯಂತಿಯೂ ಆಗಬಹುದು. ಆತಂಕವಾದಿಗಳಿಗೆ, ಭಯೊತ್ಪಾದನೆಗೆ ಸಿದ್ದರಾಮಯ್ಯ ಸರ್ಕಾರ ಕಾದುನಿಂತಂತೆ ಕಾಣುತ್ತಿದೆ. ಈ ಹಿಂದೆಯೂ ಕೂಡ ಹುಬ್ಬಳ್ಳಿ, ಉಡುಪಿಯಲ್ಲಿ ಇಂತಹ ಘಟನೆಗಳು ಸಾಲುಸಾಲಾಗಿ ನಡೆದಿದ್ದವು. ಕುಕ್ಕರ್ ಸ್ಫೋಟ ಪ್ರಕರಣ ಶಿವಮೊಗ್ಗದವರೆಗೂ ಬಂದಿತ್ತು. ಭಯೋತ್ಪಾದನೆ ತರಬೇತಿ ಪಡೆದವರು ತೀರ್ಥಹಳ್ಳಿಯಲ್ಲಿಯೇ ಇದ್ದರು. ಈ ಎಲ್ಲಾ ಘಟನೆಗಳನ್ನು ನೋಡಿದಾಗ ಆತಂಕವಾದ ನಮ್ಮ ಕಣ್ಣಮುಂದೆಯೇ ಇದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂತಹ ಅನೇಕ ಘಟನೆಗಳು ನಡೆದಿವೆ. ಇವುಗಳನ್ನೂ ಸೇರಿಕೊಂಡಂತೆ ಇಡೀ ರಾಗಿಗುಡ್ಡ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಡಾ. ಅಶ್ವತ್ಥನಾರಾಯಣ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್. ರುದ್ರೇಗೌಡ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಭಾರತೀ ಶೆಟ್ಟಿ, ಎನ್. ರವಿಕುಮಾರ್, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರಾಧ್ಯಕ್ಷ ಜಗದೀಶ್ ಉಪಸ್ಥಿತರಿದ್ದರು.