Shivamogga | ರಾಷ್ಟ್ರೀಯ ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರ ಹಣ ಕೊಡುವ ಎಟಿಎಂ ; ಬಿಜೆಪಿ ಯುವ ಮೇರ್ಚಾದಿಂದ ವಿನೂತನ ಪ್ರತಿಭಟನೆ
ಶಿವಮೊಗ್ಗ: ರಾಷ್ಟ್ರೀಯ ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರ ಹಣ ಕೊಡುವ ಎಟಿಎಂ ಆಗಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಂದು ಗೋಪಿ ವೃತ್ತದಲ್ಲಿ ಕಾಂಗ್ರೆಸ್ ಜನ ವಿರೋಧಿ ನೀತಿ ವಿರೋಧಿಸಿ ಅಣಕು ಪ್ರದರ್ಶನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಯುವ ಮೋರ್ಚಾ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೆವಾಲಾ ಅವರ ಮುಖವಾಡಗಳನ್ನು ಧರಿಸಿ ಎಟಿಎಂ ಚಿತ್ರವುಳ್ಳ ಪ್ಲೇ ಕಾರ್ಡ್ ಅಣಕು ಪ್ರದರ್ಶನ ಮಾಡಿದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವರ್ಗಾವಣೆ ದಂಧೆ ಹೆಚ್ಚಾಗಿದೆ. ಎಲ್ಲಾ ಇಲಾಖೆಗಳಲ್ಲೂ ಲಂಚ ಮಾಮೂಲಿಯಾಗಿದೆ. ಸಚಿವರು ನೇರವಾಗಿಯೇ ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ. ಇಂದಿರಾ ಕ್ಯಾಂಟೀನ್ ನಂತಹ ವಿಷಯದಲ್ಲೂ ಇವರ ಭ್ರಷ್ಟಾಚಾರ ಇದೆ. ಅಷ್ಟೇಕೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರು ಪ್ರಶಸ್ತಿ ನೀಡುವ ಸಾಹಿತಿಗಳಲ್ಲೂ ಕೂಡ ಕಮಿಷನ್ ಕೇಳುತ್ತಾರೆ ಎಂದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆ ಎಲ್ಲಿಯವರೆಗೆ ಬಂದಿದೆ ಎಂದು ಗೊತ್ತಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಹಂತದಲ್ಲೂ ರಾಷ್ಟ್ರೀಯ ಕಾಂಗ್ರೆಸ್‌ಗೆ ಕರ್ನಾಟಕ ಸರ್ಕಾರದ ಲಂಚದ ಹಣ ಕಮಿಷನ್ ಮೂಲಕ ನೀಡಲಾಗುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಬರಗಾಲದ ಬಗ್ಗೆ ಯೋಚನೆ ಇಲ್ಲ. ರೈತರಿಗೆ ವಿದ್ಯುತ್ ಇಲ್ಲ, ವಿದ್ಯುತ್ ಖರೀದಿಯಲ್ಲೂ ಮೋಸ, ಗ್ಯಾರಂಟಿಗಳ ಜಾರಿಯಲ್ಲೂ ಲಂಚ, ಹೀಗೆ ಕಾಂಗ್ರೆಸ್ ಸರ್ಕಾರ ಜನ ವಿರೋಧಿಯಾಗಿದೆ. ಇದನ್ನು ಇಡೀ ರಾಜ್ಯಕ್ಕೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಇಂತಹ ಅಣಕು ಪ್ರದರ್ಶನವನ್ನು ಯುವ ಮೋರ್ಚಾ ಹಮ್ಮಿಕೊಂಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಇ. ವಿಶ್ವಾಸ್, ಮಾಲತೇಶ್, ಹರಿಕೃಷ್ಣ, ಗಣೇಶ್, ಜಗನ್ನಾಥ್, ಅಭಿನಂದನ್ ಮೊದಲಾದವರಿದ್ದರು.