Shivamogga | ವಾಲ್ಮೀಕಿ ಸಮಾಜ ನಂಬಿಕೆಗೆ, ಶೌರ್ಯಕ್ಕೆ, ಪ್ರೀತಿ, ವಿಶ್ವಾಸಕ್ಕೆ ಇನ್ನೊಂದು ಹೆಸರಾಗಿದೆ

0 57

ಶಿವಮೊಗ್ಗ: ವಾಲ್ಮೀಕಿ ಸಮಾಜ ನಂಬಿಕೆಗೆ, ಶೌರ್ಯಕ್ಕೆ, ಪ್ರೀತಿ, ವಿಶ್ವಾಸಕ್ಕೆ ಇನ್ನೊಂದು ಹೆಸರಾಗಿದೆ ಎಂದು ಉಪನ್ಯಾಸಕ ಎನ್. ಹೆಚ್. ಪ್ರಹ್ಲಾದಪ್ಪ ಹೇಳಿದ್ದಾರೆ.


ಅವರು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ನಾಡದೊರೆ ರಾಜವೀರ ಮದಕರಿ ನಾಯಕ ಇವರ ಜಯಂತೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.


ಚರಿತ್ರೆಯಲ್ಲಿ ನಾಯಕ ವಂಶಸ್ಥರು 211 ವರ್ಷ ಆಳ್ವಿಕೆ ನಡೆಸಿದ್ದು, 13 ಅರಸರು ಆಳಿದ್ದಾರೆ. ಚಿತ್ರದುರ್ಗದ ಪಾಳೇಗಾರರು ಬ್ರಿಟಿಷರಿಗೆ ಮತ್ತು ಹೈದರಾಲಿಗೆ ಸಿಂಹಸ್ವಪ್ನವಾಗಿದ್ದರು. ಅದರಲ್ಲೂ ಮದಕರಿ ನಾಯಕ 12 ವರ್ಷದ ಬಾಲಕನಿದ್ದಾಗ ಗದ್ದುಗೆ ಏರಿ ಇಡೀ ನಾಯಕ ಸಮುದಾಯಕ್ಕೆ ಕಿರೀಟಪ್ರಾಯರಾಗಿ ಚರಿತ್ರೆ ಬರೆದಿದ್ದಾರೆ. ಅವರ ಏಳು ಸುತ್ತಿನ ಕೋಟೆಯನ್ನು ಯಾರಿಂದಲೂ ಬೇಧಿಸಲು ಆಗವುದಿಲ್ಲ ಎಂದು ಅರಿತ ಹೈದರಾಲಿ ಸ್ನೇಹ ಬೆಳೆಸಿ ಮೋಸದಿಂದ ಬಂಧಿಸಿ ವಿಷಪ್ರಾಶನ ಮಾಡಿಸಿ ಕೊಲ್ಲಿಸಿದ್ದ. ಕೊನೇ ಗಳಿಗೆವರೆಗೂ ಮದಕರು ನಾಯಕರು ಹೈದರಾಲಿಯ ಸಾಮಂತ ರಾಜನಾಗಲು ಒಪ್ಪದೆ ಕಪ್ಪ ನೀಡಲು ನಿರಾಕರಿಸಿ ವೀರಮರಣವನ್ನಪ್ಪಿದ್ದು, ಚರಿತ್ರೆ ಎಂದರು.


ವಾಲ್ಮೀಕಿ ಸಮಾಜ ರಾಜ್ಯದಲ್ಲಿ 80 ಲಕ್ಷ ಜನರಿದ್ದರೂ ಮೀಸಲಾತಿಯಲ್ಲಿ ಹೆಚ್ಚಳವಾಗಿಲ್ಲ. ಸಮುದಾಯ ತಾಯಿಗೆ ಸಮಾನವಾಗಿದ್ದು, ಈ ಸಮುದಾಯಕ್ಕೆ ಎಲ್ಲಾ ರಾಜಕಾರಣಿಗಳಿಂದಲೂ ಅನ್ಯಾಯವಾಗುತ್ತಾ ಬಂದಿದೆ. ನಮ್ಮ ಸಮುದಾಯದ ಮಕ್ಕಳಿಗೆ ಖಡ್ಗದ ಬದಲು ಪೆನ್ನು ನೀಡಿ ವಿದ್ಯಾವಂತರನ್ನಾಗಿಸಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಸಿದ್ಧಗೊಳಿಸಬೇಕು. ಸಮುದಾಯದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಅನ್ಯಾಯವನ್ನು ಸರಿಪಡಿಸಲು ಹೋರಾಟ ನಡೆಸಬೇಕು ಎಂದರು.


ರಾಜ್ಯ ಗೌರವಾಧ್ಯಕ್ಷ ಭದ್ರಾಪುರ ಗಿರೀಶ್ ಮಾತನಾಡಿ, ನಾಲ್ಕು ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಎಸ್ಟಿ ಮೀಸಲಾತಿ ಈಗ 51 ಜನಾಂಗಕ್ಕೆ ವಿಸ್ತರಿಸಿದೆ. ನಮ್ಮ ಸಮಾಜದ 15 ಎಂಎಲ್‌ಎಗಳು, 2 ಸಂಸದರಿದ್ದರೂ ಸದನದಲ್ಲಿ ತುಟಿ ಬಿಚ್ಚುತ್ತಿಲ್ಲ. ಈಗ ಕುರುಬ ಸಮಾಜವನ್ನು ಕೂಡ ಎಸ್ಟಿಗೆ ಸೇರಿಸಲು ಒತ್ತಡ ಹೇರಲಾಗುತ್ತಿದೆ. ಇದರಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗುವುದು ನಿಶ್ಚಿತ. ಆದ್ದರಿಂದ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.


ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಶಿಡ್ಲಕೋಣ ವಾಲ್ಮೀಕಿ ಸಂಸ್ಥಾನ ಮಠದ ಶ್ರೀ ಸಂಜಯ್‌ಕುಮಾರ್ ನಂದಮಹಾಸ್ವಾಮೀಜಿ ವಹಿಸಿದ್ದರು. ಜಿಲ್ಲಾಧ್ಯಕ್ಷ ಆರ್. ಹರೀಶ್, ಹೆಚ್.ಡಿ.ಬಳಿಗಾರ್,ಆರ್. ಲಕ್ಷ್ಮಣಪ್ಪ, ತಾರಾ, ವೈ.ಹೆಚ್. ನಾಗರಾಜ್, ಹನುಮಂತಪ್ಪ, ಮಂಜಪ್ಪ, ನಿಂಬೆಗೊಂದಿ ಸುರೇಶ್, ಲಕ್ಷ್ಮಿನಾರಾಯಣ, ನಾಗೇಂದ್ರಪ್ಪ, ಶೋಭಾ, ರಂಗೇಶ್ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!