Shivamogga | ವೈಭವದ ಜಂಬೂ ಸವಾರಿಗೆ ಕ್ಷಣಗಣನೆ

0 74

ಶಿವಮೊಗ್ಗ: 9 ದಿನಗಳ ಕಾಲ  ರಾಜ್ಯದಲ್ಲೇ ಎರಡನೇ ಅತೀ ದೊಡ್ಡ ಮತ್ತು ವೈವಿಧ್ಯಮಯ ವೈಭವ ಪೂರ್ಣ ದಸರಾ ಎಂದು ಹೆಸರಾದ ಶಿವಮೊಗ್ಗ ದಸರಾದ ಹತ್ತನೇ ದಿನ ವಿಜಯ ದಶಮಿ ಅಂಗವಾಗಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರದ ವೈಭವದ ಅಂಭಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ.


ಇಂದು ಮಧ್ಯಾಹ್ನ 2.30ಕ್ಕೆ ಕೋಟೆ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ ಶ್ರೀದೇವಿಯ ವಿಗ್ರಹದ ಮೆರವಣಿಗೆ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೇ ಆವರಣದಿಂದ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆಗೊಳ್ಳಲಿದೆ. ನಂತರ ಅಲಂಕೃತ ಶ್ರೀಚಾಮುಂಡೇಶ್ವರಿ ದೇವಿಯ ಮೆರವಣಿಗೆಯಲ್ಲಿ ಅಂಬಾರಿಯನ್ನು ಹೊರುವ ಸಾಗರ್ ಮತ್ತು ಎಡಕ್ಕೆ ಮತ್ತು ಬಲಕ್ಕೆ ನೇತ್ರಾವತಿ ಹಾಗೂ ಹೇಮಾವತಿ ಇವರೊಂದಿಗೆ ಮೆರವಣಿಗೆಯಲ್ಲಿ ಮಂಗಳವಾಧ್ಯ ಸಮಾಳವಾದ್ಯ, ನಂದಿಧ್ವಜ ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಯಕ್ಷಗಾನ, ಕೀಲುಕುದುರೆ, ನಗಿಸುವ ಗೊಂಬೆಗಳ ಕುಣಿತ, ದೊಡ್ಡ ಗೊಂಬೆಗಳ ಕುಣಿತ, ಕುಂಡ ಹೊತ್ತ ಮಹಿಳೆಯ ಕುಣಿತ, ಮಹಿಳಾ ಡೊಳ್ಳು ಕುಣಿತ ಹುಲಿವೇಷ ಕುಣಿತ, ರೋಡ್ ಆರ್ಕೇಸ್ಟ್ರಾ ಹಾಗೂ ವಿವಿಧ ಕಲಾ ತಂಡಗಳಿಂದ ಮೆರವಣಿಗೆ ಸಾಗಲಿದೆ.


ಅಲ್ಲದೇ ನಗರದ 200ಕ್ಕೂ ಹೆಚ್ಚು ದೇವರುಗಳು ಈ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಇಡೀ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸಂಜೆ 6-30ಕ್ಕೆ ಮೆರವಣಿಗೆ ಫ್ರೀಡಂ ಪಾರ್ಕ್‌ಗೆ ತಲುಪಲಿದ್ದು, ಶಿವಮೊಗ್ಗ ತಾಲ್ಲೂಕು ದಂಡಾಧಿಕಾರಿಗಳು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬನ್ನಿ ಮುಡಿದ ನಂತರ ಅತ್ಯಾಕರ್ಷಕ ಪಟಾಕಿ ಸಿಡಿಮದ್ದು, ರಾವಣ ದಹನ ಏರ್ಪಡಿಸಲಾಗಿದೆ.


ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ದಿಗ್ಗಜ ಕಲಾವಿದರಿಂದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದು, ಸಂಸದರು, ಶಾಸಕರು, ಹಾಗೂ ಎಲ್ಲಾ ಜನ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ನಾಡಿನ ಪ್ರಸಿದ್ಧ ದಸರಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಶಿವಮೊಗ್ಗ ದಸರಾ ಸಮಿತಿ ವಿನಂತಿಸಿದೆ.

Leave A Reply

Your email address will not be published.

error: Content is protected !!