Shivamogga | ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈದ್‌ಮಿಲಾದ್ ಮೆರವಣಿಗೆ ದಿನಾಂಕ ಬದಲು ; ಪರ್ವೀಜ್

0 1,742

ಶಿವಮೊಗ್ಗ: ಈ ಬಾರಿಯ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ಒಂದೇ ದಿನ ಬಂದಿರುವುದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೆರವಣಿಗೆ ದಿನಾಂಕವನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುನ್ನಿ ಜಮೈತುಲ್ ಉಲ್ಮ ಕಮಿಟಿ ನಿರ್ಧರಿಸಿದೆ ಎಂದು ಸಮಿತಿಯ ಅಫ್ತಾಬ್ ಪರ್ವೀಜ್ ತಿಳಿಸಿದ್ದಾರೆ.


-==ಇಂದು ಗಾಂಧಿ ಬಜಾರಿನ ಜಾಮಿಯಾ ಮಸೀದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಪ್ರತಿವರ್ಷ ಹಿಂದೂ ಮತ್ತು ಮುಸಲ್ಮಾನ ಬಾಂಧವರು ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ನಗರದೆಲ್ಲೆಡೆ ಅಲಂಕಾರಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದಾರೆ. ಸೆ.28ರಂದು ಅನಂತ ಚತುರ್ದಶಿಯಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನಡೆಯಲಿದೆ. ಇನ್ನೊಂದು ಪ್ರಮುಖ ಗಣಪತಿಯಾದ ಓಂ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಅಕ್ಟೋಬರ್ 1ರಂದು ನಿಗದಿಪಡಿಸಲಾಗಿತ್ತು. ಈ ಮೂರು ಪ್ರಮುಖ ಆಚರಣೆಯಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳಲಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಶಾಂತಿಯುತವಾಗಿ ಈ ಹಬ್ಬ ಮತ್ತು ಮೆರವಣಿಗೆ ನಡೆಸಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅನೇಕ ಬಾರಿ ಧಾರ್ಮಿಕ ಮುಖಂಡರು ಮತ್ತು ಸಾರ್ವಜನಿಕರ ಜೊತೆ ಚರ್ಚೆ ನಡೆಸಿದ್ದರು. ಇದರ ಪರಿಣಾಮವಾಗಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಅನುವು ಮಾಡಿಕೊಡಲು ಈದ್ ಮಿಲಾದ್ ಮೆರವಣಿಗೆ ದಿನಾಂಕವನ್ನು ಬದಲಾಯಿಸಿಕೊಂಡಿದ್ದು, ಈ ಮೆರವಣಿಗೆಯು ಅ.1ರಂದು ಮಧ್ಯಾಹ್ನ ಮೂರು ಗಂಟೆಗೆ ಜಾಮಿಯಾ ಮಸೀದಿಯಿಂದ ಹೊರಟು ಪ್ರತಿ ವರ್ಷದಂತೆ ನಿಗದಿತ ಮಾರ್ಗದಲ್ಲಿ ಸಂಚರಿಸಲಿದೆ ಎಂದರು.


ಅದೇ ರೀತಿ ಓಂ ಗಣಪತಿ ಮೆರವಣಿಗೆಯನ್ನು ಸೆ.30ರಂದು ಆಚರಿಸಲು ಸಮಿತಿ ನಿರ್ಧರಿಸಿದ್ದು, ಈದ್ ಮಿಲಾದ್ ಮೆರವಣಿಗೆಗೆ ಅನುಕೂಲ ಮಾಡಿಕೊಟ್ಟಿದೆ. ಎರಡೂ ಧರ್ಮದ ಮುಖಂಡರು ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಅಭೂತ ಪೂರ್ವ ತಿರ್ಮಾನ ಕೈಗೊಂಡಿದ್ದಾರೆ. ಇದು ಇಡೀ ಜಿಲ್ಲೆಯ ವಿವಿಧ ತಾಲೂಕುಗಳಿಗೂ ಅನ್ವಯವಾಗುತ್ತದೆ. ಈಗಾಗಲೇ ಎಲ್ಲಾ ತಾಲೂಕುಗಳ ಸಮಿತಿಯವರಿಗೂ ತಿಳಿಸಿದ್ದು, ಸ್ಥಳೀಯವಾಗಿ ಹಬ್ಬದ ಮೆರವಣಿಗೆಯ ದಿನಾಂಕಗಳನ್ನು ನಿಗದಿಪಡಿಸಲು ಮತ್ತು ಯಾವುದೆ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಎಂದರು.


ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್ ಇಲಾಖೆಯವರು ಬಂದೋಬಸ್ತ್ಗೆ ನಿಯೋಜಿಸಿರುವ ಸಿಬ್ಬಂದಿಗಳ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಎಲ್ಲಾ ಹಿರಿಯರು ಮತ್ತು ಅಧಿಕಾರಿ ವರ್ಗದವರು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದು, ಸೆ.28ರಂದು ಹಿಂದೂ ಮಹಸಭಾ ಗಣಪತಿ ಮೆರವಣಿಗೆ ಸೆ.30ರಂದು ಓಂ ಗಣಪತಿ ಮೆರವಣಿಗೆ, ಮತ್ತು ಅ.1ರಂದು ಈದ್‌ಮಿಲಾದ್ ಮೆರವಣಿಗೆ ಸಕಲ ಅಲಂಕಾರ ಮತ್ತು ಸಂಭ್ರಮಗಳೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಬೇಗ್, ಕಾರ್ಯದರ್ಶಿ ಏಜಾಜ್ ಪಾಷಾ, ಪ್ರಮುಖರಾದ ಮುನಾವರ್ ಪಾಶಾ, ಮುಫ್ತಿ ಆಖಿಲ್‌ರಜಾ, ಖಾಜಿ ಅಶ್ರಫ್ ಸಾಬ್, ಅಶ್ರಫ್ ಅಹ್ಮದ್, ರಿಜ್ವಾನ್ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!