ಶಿವಮೊಗ್ಗ: ‘ಪ್ರತಿ ಕೆ.ಜಿ.ಗೆ 100 ರೂ. ಇದ್ದ ಆಮದು ಶುಲ್ಕವನ್ನು 350 ರೂ.ಗೆ ಹೆಚ್ಚಿಸಿ ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ಕಾಪಾಡಿದ್ದು ಬಿಜೆಪಿ’ ಎಂದು ತಾಲ್ಲೂಕಿನ ಆಯನೂರಿನಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಮಲೆನಾಡಿನ ಅಡಿಕೆ ಬೆಳೆಗಾರರ ಮನಗೆಲ್ಲಲು ಪ್ರಯತ್ನಿಸಿದರು.
‘ವಿದೇಶದಿಂದ ಕಡಿಮೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿ ಬೆಳೆಗಾರರನ್ನು ನಾಶ ಮಾಡಲು ಕಾಂಗ್ರೆಸ್ ಷಡ್ಯಂತ್ರ ನಡೆಸಿತ್ತು’ ಎಂದು ಆರೋಪಿಸಿದ ಮೋದಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಗುಜರಾತ್‌ಗೆ ಬಂದು ನನ್ನನ್ನು ಭೇಟಿ ಮಾಡಿ, ಅಡಿಕೆ ಬೆಳೆಗಾರರ ಸಂಕಷ್ಟ ಬಿಚ್ಚಿಟ್ಟಿದ್ದರು. ಹೀಗಾಗಿ ಶುಲ್ಕ ಹೆಚ್ಚಿಸಿ ಆಮದು ಮಾಡಿಕೊಳ್ಳುವ ಅವಕಾಶ ತಪ್ಪಿಸಿದ್ದೆ’ ಎಂದರು.
‘ಅಡಿಕೆ ಆಮದು ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನೀತಿಯನ್ನು ತುಲನೆ ಮಾಡಿ ನಮ್ಮ ಪ್ರೀತಿ ಹೇಗಿದೆ ಎಂಬುದನ್ನು ಅರಿತು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
‘ಗ್ಯಾರಂಟಿ ಕಾರ್ಡ್ ನೆಪದಲ್ಲಿ ಕಾಂಗ್ರೆಸ್, ಸುಳ್ಳುಗಳ ಗಾಳಿ ತುಂಬಿದ ಬಲೂನನ್ನು ಹಾರಿಬಿಟ್ಟಿದೆ. ಆದರೆ, ಚುನಾವಣೆಗೆ ಮುನ್ನ ಜನರೇ ಆ ಬಲೂನನ್ನು ಒಡೆದಿದ್ದಾರೆ. ಯಡಿಯೂರಪ್ಪ ಅವರ ನೆಲದಲ್ಲಿ (ಶಿವಮೊಗ್ಗ) ನಿಂತು ನಾನು ಇಡೀ ಕರ್ನಾಟಕಕ್ಕೆ ಅಸಲಿ ಗ್ಯಾರಂಟಿ ಕೊಡುವೆ. ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ. ಕರ್ನಾಟಕದ ವಿಕಾಸದ ಮೂಲಕ ಬಡ್ಡಿ ಸಮೇತ ನಿಮ್ಮ ಪ್ರೀತಿ-ಋಣ ತೀರಿಸುವೆ’ ಎಂದು ಭರವಸೆ ನೀಡಿದರು.
’85 ಪರ್ಸೆಂಟ್ ಕಮಿಷನ್ ತಿನ್ನುವ ಕಾಂಗ್ರೆಸ್ ನಿಮ್ಮ ಉತ್ತಮ ಭವಿಷ್ಯ ರೂಪಿಸಲಿದೆಯೇ, ನಿಮ್ಮ ಅಪ್ಪ, ಅಜ್ಜ, ಮುತ್ತಜ್ಜ ಎದುರಿಸಿದ ಸಮಸ್ಯೆಯನ್ನು ನೀವು ಅನುಭವಿಸಬೇಕೇ’ ಎಂದ ಅವರು, ‘ಬಿಜೆಪಿ ಮಾತ್ರ ಯುವ ಮತದಾರರಿಗೆ ಸುಭದ್ರ ಭವಿಷ್ಯ ರೂಪಿಸಿಕೊಡಲಿದೆ’ ಎಂದರು.